ಮಾಗಡಿ: ಒಂದೊಳ್ಳೆ ಪರಿಸರವನ್ನು ನಿರ್ಮಾಣ ಮಾಡಬೇಕೆನ್ನುವುದು ಎಲ್ಲರ ಆಶಯ. ಹೀಗಾಗಿ ಎಲ್ಲೆಡೆ ಶೌಚಾಲಯ ನಿರ್ಮಿಸಲಾಗುತ್ತಿದ್ದರೂ ಎಲ್ಲೆಂದರಲ್ಲಿ ಮೂತ್ರ, ಮಲವಿಸರ್ಜನೆ ಮಾಡುವ ಮಂದಿಗೇನು ಕೊರತೆಯಿಲ್ಲ.
ಬಹಳಷ್ಟು ಮಂದಿಗೆ ಶೌಚಾಲಯವಿದ್ದರೂ ಅದರೊಳಗೆ ಹೋಗದೆ ಪಕ್ಕದಲ್ಲಿ ಮಾಡುವ ಕೆಟ್ಟ ಅಭ್ಯಾಸ. ಹೀಗಾಗಿ ಸುಂದರ ಪರಿಸರ ನಿರ್ಮಾಣದ ಕನಸಿಗೆ ಭಾರೀ ಹೊಡೆತ ಬೀಳುತ್ತಿದೆ. ನಮ್ಮ ಜನ ಶೌಚಾಲಯವಿದ್ದರೂ ಪಕ್ಕದ ಕಟ್ಟಡದ ಗೋಡೆ, ಸಂದಿಗೊಂದಿಗಳಲ್ಲಿ ಜಲಬಾಧೆ ತೀರಿಸಿಕೊಂಡು ಇಡೀ ಪರಿಸರ ಗಬ್ಬೆದ್ದು ನಾರುವಂತೆ ಮಾಡಿಬಿಡುತ್ತಾರೆ. ಇದಕ್ಕೆ ಮಾಗಡಿಯ ತಾಲೂಕು ಕಚೇರಿಯ ಶೌಚಾಲಯ ಸಾಕ್ಷಿಯಾಗಿದೆ. ಶೌಚಾಲಯವಿದ್ದರೂ ಇಲ್ಲಿ ಅದು ಬಳಕೆಯಾಗದೆ, ಎಲ್ಲರೂ ಬಯಲಲ್ಲೇ ಶೌಚಾಲಯ ಮಾಡಿ ಇಡೀ ವಾತಾವರಣ ದುರ್ವಾಸನೆಯಿಂದ ಕೂಡಿ ಅಸಹ್ಯ ಮೂಡಿಸುತ್ತಿದೆ.
ಇಲ್ಲಿ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿ ನಿರ್ಮಿಸಿದ ಆಧುನಿಕವಾದ ಶೌಚಾಲಯ ಗೌಣವಾಗಿದೆ. ಕಚೇರಿ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಅದರ ಒಳಗಡೆ ಹೋಗದೆ ಪಕ್ಕದ ಕಟ್ಟಡದ ಹಿಂಭಾಗವೇ ಮೂತ್ರ ಮಾಡುತ್ತಿರುವುದು ಇಡೀ ವಾತಾವರಣ ಗಬ್ಬೆದ್ದು ನಾರಲು ಕಾರಣವಾಗಿದೆ. ಇಲ್ಲಿ ಉಚಿತ ಶೌಚಾಲಯವಿದ್ದರೂ ಬಳಸಲು ಹಿಂದೆ ಮುಂದೆ ನೋಡುವ ನಾಗರಿಕರು ತಾಲೂಕು ಕಚೇರಿಯ ವಾಹನ ನಿಲುಗಡೆಯ ಪಕ್ಕದಲ್ಲಿ, ಖಜಾನೆಯ ಹಿಂದೆ ಗೋಡೆಗೆ ಮೂತ್ರ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ.
ದೂರದ ಹಳ್ಳಿಗಳಿಂದ ಬರುವವರೆಲ್ಲರೂ ಕಟ್ಟಡದ ಹಿಂಭಾಗದ ಗೋಡೆಯನ್ನೇ ಬಳಸುತ್ತಿದ್ದಾರೆ. ಯಾರಾದರೂ ಇಲ್ಲಿ ಮೂತ್ರ ಮಾಡಬೇಡಿ ಎಂದರೆ ಅವರ ಮೇಲೆಯೇ ಜಗಳಕ್ಕೆ ಬರುತ್ತಾರೆ ಎಂಬುದು ಸ್ಥಳೀಯರ ಅಳಲಾಗಿದೆ. ಇನ್ನು ಮುಂದೆಯಾದರೂ ಇಲ್ಲಿ ಮೂತ್ರ ಮಾಡುವವರ ತಡೆಗೆ ಮುಂದಾಗಲಿ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.