ಮಡಿಕೇರಿ: ಕೆಲವೊಮ್ಮೆ ಹೆತ್ತವರು ಮೈಯೆಲ್ಲ ಕಣ್ಣಾಗಿದ್ದರೂ ಮಕ್ಕಳು ಮಾಡುವ ತುಂಟತನ ಹೆತ್ತವರ ಜೀವವನ್ನೇ ನಡುಗಿಸಿ ಬಿಡುತ್ತದೆ. ಮಗು ಆಟವಾಡುತ್ತಿದೆ ಎಂದು ಪೋಷಕರು ಸುಮ್ಮನಾದರೆ ಅದು ತನಗರಿವಿಲ್ಲದೆ ಏನೋವೊಂದು ಎಡವಟ್ಟು ಮಾಡಿಕೊಂಡಿರುತ್ತದೆ. ಕುಶಾಲನಗರದಲ್ಲೊಂದು ಮಗು ಮಣಿಯನ್ನು ಮೂಗಿನೊಳಗೆ ಹಾಕಿಕೊಂಡು ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಹಂತಕ್ಕೆ ಹೋಗಿತ್ತಾದರೂ ಹೆತ್ತವರ ಸಮಯಪ್ರಜ್ಞೆ ಮತ್ತು ವೈದ್ಯರ ಕಾರ್ಯಕ್ಷಮತೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಕುಶಾಲನಗರ ಸಮೀಪದ ಬೈಚನಹಳ್ಳಿಯ ನಿವಾಸಿ ಅಬ್ದುಲ್ ರಶೀದ್ ಅವರ ಒಂದೂವರೆ ವರ್ಷದ ಮಗಳು ರಿಫಾನ್ ಗೆ ಮಣಿಯಿರುವ ಅಂಗಿಯನ್ನು ಧರಿಸಿದ್ದರು. ಮಗು ಆಟವಾಡುತ್ತಾ ತನ್ನ ಅಂಗಿಯಲ್ಲಿದ್ದ ಮಣಿಯನ್ನು ಕಿತ್ತು ಒಂದೊಂದಾಗಿ ಮೂಗಿನೊಳಕ್ಕೆ ಸುಮಾರು ಹತ್ತು ಮಣಿಯನ್ನು ಹಾಕಿಕೊಂಡಿದೆ. ಮಗು ಮಣಿಯನ್ನು ಕಿತ್ತು ಮೂಗಿನೊಳಕ್ಕೆ ಹಾಕುತ್ತಿದ್ದುದನ್ನು ಕಂಡ ಪೋಷಕರು ಕೂಡಲೇ ಮಗುವಿನ ಮೂಗಿನಿಂದ ಸುಮಾರು ಐದು ಮಣಿಯನ್ನು ತೆಗೆದಿದ್ದಾರೆ. ಉಳಿದ ಮಣಿಗಳು ಅದಾಗಲೇ ಮೂಗಿನೊಳಕ್ಕೆ ಹೋಗಿಯಾಗಿತ್ತು. ಇದರಿಂದ ಮೂಗಿನಲ್ಲಿ ನೋವು ಶುರುವಾಗಿ ಮಗು ಜೋರಾಗಿ ಅಳಲಾರಂಭಿಸಿತ್ತಲ್ಲದೆ, ಉಸಿರಾಡಲು ತೊಡಕಾಗಿತ್ತು. ತಕ್ಷಣ ಪೋಷಕರು ಮಡಿಕೇರಿಯ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದು, ಡಾ.ದೀಪಕ್ ಅವರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸನಾಳದಲ್ಲಿ ಸಿಲುಕಿದ್ದ ಐದು ಮಣಿಗಳನ್ನು ಹೊರತೆಗೆಯಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗುವಿನ ಪ್ರಾಣ ಉಳಿದಿದ್ದು, ಆರೋಗ್ಯವಾಗಿದೆ. ಪೋಷಕರು ಖುಷಿಯಾಗಿದ್ದಾರೆ.