ಮಡಿಕೇರಿ: ಯವಕಪಾಡಿ ಗ್ರಾಮ ವ್ಯಾಪ್ತಿಯ ಅಡಿಯ ಜನಾಂಗದ ಕುಟುಂಬಗಳು ಸಂಚರಿಸುತ್ತಿದ್ದ ಮಾರ್ಗಕ್ಕೆ ನಿರ್ಬಂಧ ಹೇರಿದ್ದ ರೆಸಾರ್ಟ್ ಕೊನೆಗೂ ಪ್ರತಿಭಟನೆಗೆ ಮಣಿದು ಸ್ಥಳೀಯರಿಗೆ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದೆ.
ಸದ್ಯಕ್ಕೆ ನಿರ್ಬಂಧಿಸಿದ ರಸ್ತೆಯನ್ನೆ ಸಂಚಾರಕ್ಕೆ ಬಿಟ್ಟು ಕೊಡುವುದಾಗಿ ರೆಸಾರ್ಟ್ ಆಡಳಿತ ಮಂಡಳಿ ಶಾಸಕ ಕೆ.ಜಿ.ಬೋಪಯ್ಯ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಭರವಸೆ ನೀಡಿತು. ಕಾವೇರಿಸೇನೆ, ಸತ್ಯಾನ್ವೇಷಣಾ ಸಮಿತಿ ಹಾಗೂ ಯವಕಪಾಡಿ ಗ್ರಾಮದ ಅಡಿಯ ಜನಾಂಗದ ಕುಟುಂಬಗಳ ಸದಸ್ಯರು ಜೂ.16 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಮೂಲ ರಸ್ತೆಗಾಗಿ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದರು. ಜಿಲ್ಲಾಡಳಿತ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲವೆಂದು ಅಸಮಾಧಾನಗೊಂಡ ಪ್ರತಿಭಟನಾಕಾರರು ಜೂ.17 ರಂದು ಕೂಡ ಧರಣಿಯನ್ನು ಮುಂದುವರಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ.ಹರೀಶ್, ಧರಣಿ ನಿರತರೊಂದಿಗೆ ಸಮಾಲೋಚನೆ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಕೆ.ಜಿ.ಬೋಪಯ್ಯ, ರೆಸಾರ್ಟ್ ಕಾನೂನನ್ನು ಉಲ್ಲಂಘಿಸಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಿ ಎಂದು ಸೂಚನೆ ನೀಡಿದರು. ಅಡಿಯ ಜನಾಂಗಕ್ಕೆ ಓಡಾಡಲು ರಸ್ತೆಯನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೆ.ಜಿ. ಬೋಪಯ್ಯ, ರೆಸಾರ್ಟ್ ನಿರ್ಬಂಧ ಹೇರಿರುವ ಸ್ಥಳಕ್ಕೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ತಹಸೀಲ್ದಾರರನ್ನು ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದರು.
ನಂತರ ಶಾಸಕರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಅಡಿಯ ಜನಾಂಗದ ಮುಖಂಡರು, ಸತ್ಯಾನ್ವೇಷಣಾ ಸಮಿತಿಯ ಪ್ರಮುಖರು ನಿರ್ಬಂಧಿತ ರಸ್ತೆ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದರು. ರೆಸಾರ್ಟ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ ಸಂದರ್ಭ ಡಿಸೆಂಬರ್ ತಿಂಗಳಿನೊಳಗೆ ಅಡಿಯ ಕುಟುಂಬಗಳ ಸಂಚಾರಕ್ಕೆ ಪರ್ಯಾಯ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲಿಯವರೆಗೆ ನಿರ್ಬಂಧಿಸಲಾಗಿರುವ ರಸ್ತೆಯಲ್ಲೆ ಓಡಾಡಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು ಎಂದು ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್ ಹೇಳಿದ್ದಾರೆ.
ಅಡಿಯ ಕಟುಂಬಗಳ ಮನೆಗಳಿಗೆ ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯ ದೊರಕಿಸಿಕೊಡುವ ಭರವಸೆಯೂ ರೆಸಾರ್ಟ್ ಆಡಳಿತ ಮಂಡಳಿಯಿಂದ ದೊರಕಿದೆ ಎಂದು ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಳೆದ ಅನೇಕ ತಿಂಗಳುಗಳಿಂದ ರಸ್ತೆ ನಿರ್ಬಂಧದಿಂದ ಸಂಕಷ್ಟದಲ್ಲಿದ್ದ ಅಡಿಯ ಕುಟುಂಬದ ಮಂದಿ ಪ್ರತಿಭಟನೆಯಿಂದ ದೊರೆತ ಜಯದಿಂದ ನಿಟ್ಟುಸಿರು ಬಿಟ್ಟಿದ್ದಾರೆ.