ಚಾಮರಾಜನಗರ: ಪಟ್ಟಣದ ನಡುವೆ ಇರುವ ಬೀದಿಯೊಂದು ಉತ್ತಮ ಚರಂಡಿ ವ್ಯವಸ್ಥೆ ಹೊಂದದೆ, ಡಾಂಬರು ರಸ್ತೆಯಿಲ್ಲದೆ, ಗಿಡಗಂಟಿಗಳಿಂದ ಕೂಡಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಸತ್ಯ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊಸೂರು-ದುಂದಾಸನಪುರ ನಡುವೆ ಹಾದುಹೋಗಿರುವ 21 ನೇ ವಾರ್ಡಿನ ಕಥೆ ನೋಡಿದರೆ ನಮಗೆ ಪಟ್ಟಣದ ಕಥೆಯೇ ಹೀಗಾದರೆ ಇನ್ನು ಹಳ್ಳಿಗಳ ಪರಿಸ್ಥಿತಿ ಇನ್ನೇನಪ್ಪಾ ಎಂಬ ಚಿಂತೆ ಕಾಡದಿರದು.
ಈಗಾಗಲೇ ಗುಂಡ್ಲುಪೇಟೆಯಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ಪಟ್ಟಣದ ಜನ ಸೊಳ್ಳೆಗಳ ಹಾವಳಿಯಿಂದಾಗಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಿರುವಾಗ ಪಟ್ಟಣದಲ್ಲಿ ಕುರುಚಲು ಕಾಡು ಬೆಳೆದು, ಚರಂಡಿಯನ್ನೆಲ್ಲ ಆಕ್ರಮಿಸಿ ತ್ಯಾಜ್ಯ ನೀರು ಹರಿಯದೆ ಅಲ್ಲಿಯೇ ನಿಂತರೆ ದುರ್ವಾಸನೆ ಬೀರುತ್ತಾ ಸೊಳ್ಳೆಗಳಿಗೆ ಆವಾಸ ಸ್ಥಾನವಾಗಿ ಮಾರ್ಪಟ್ಟರೆ ಇಲ್ಲಿ ವಾಸ ಮಾಡುವ ಜನರ ಗತಿಯೇನು?
ಈ ವ್ಯಾಪ್ತಿಯಲ್ಲಿ ಬಡವರೇ ವಾಸ ಮಾಡುತ್ತಿರುವುದರಿಂದ ಹೇಗೋ ಬದುಕುತ್ತಾರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂಬುದು ಸ್ಥಳೀಯ ಪ್ರತಿನಿಧಿಗಳ ಧೋರಣೆಯೋ ಗೊತ್ತಿಲ್ಲ. ಯಾರೂ ಕೂಡ ಇದರತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಪರಿಣಾಮ ಇಲ್ಲಿಯ ಜನ ಸದಾ ಭಯದಲ್ಲಿಯೇ ಬದುಕುವಂತಾಗಿದೆ. ಈ ವಾರ್ಡ್ ನಲ್ಲಿ ಬೀಡಿ ಕಟ್ಟುವ ಮತ್ತು ಕುರಿ, ಕೋಳಿ ಸಾಕಾಣಿಕೆ ಮಾಡಿ ಬದುಕುವ ಬಡ ಜನರೇ ಹೆಚ್ಚಿದ್ದಾರೆ. ಇಲ್ಲಿನ ಮನೆಗಳ ಪಕ್ಕದಲ್ಲಿ ಖಾಲಿ ಜಾಗಗಳಿದ್ದು, ಅದರ ಮಾಲಿಕರು ಕುರುಚಲು ಕಾಡುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇನ್ನು ಬೀದಿಗೊಂದು ಸುತ್ತು ಹೊಡೆದರೆ ಬರೀ ಇಲ್ಲಗಳದ್ದೇ ಸಾಮ್ರಾಜ್ಯ ಕಾಣಿಸುತ್ತದೆ.
ರಸ್ತೆ ಇಲ್ಲ, ಚರಂಡಿ ಸುಸ್ಥಿತಿಯಲ್ಲಿಲ್ಲ, ಸ್ವಚ್ಛತೆಯಂತು ಇಲ್ಲವೇ ಇಲ್ಲ. ಹೀಗೆ ಹತ್ತಾರು ಸಮಸ್ಯೆಗಳು ಮೇಲ್ನೋಟಕ್ಕೆ ಕಾಣಲು ಸಿಗುತ್ತದೆ. ಖಾಲಿ ಸ್ಥಳದಲ್ಲಿ ಬೆಳೆದ ಮುಳ್ಳಿನ ಪೊದೆಗಳು ಮನೆಯನ್ನೇ ಆವರಿಸಿ ಬೆಳೆಯುತ್ತಿವೆ. ಈ ಪೊದೆಗಳಲ್ಲಿ ಹಾವು, ಚೇಳಿನಂತಹ ವಿಷ ಜಂತುಗಳು ಸೇರಿಕೊಂಡು ಭಯ ಹುಟ್ಟಿಸುತ್ತಿವೆ. ಇನ್ನು ಬೀದಿ ನಾಯಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ಕುರಿ, ಕೋಳಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿವೆ.
ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ತ್ಯಾಜ್ಯ ಕೊಳೆತು ನಾರುತ್ತಿದೆ. ಜತೆಗೆ ದುರ್ವಾಸನೆ ಬೀರುತ್ತಿದೆ. ಇಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರಾತ್ರಿಯಾದರೆ ಮನೆಯೊಳಕ್ಕೆ ನುಗ್ಗಿ ಕಚ್ಚುತ್ತಿವೆ.
ಈಗಾಗಲೇ ಡೆಂಗ್ಯೂನಿಂದ ಹಲವರು ಬಳಲುತ್ತಿದ್ದು, ಇಲ್ಲಿನ ಪರಿಸರವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಹಲವರು ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಉತ್ತಮ ವಾತಾವರಣ ನಿರ್ಮಿಸಿಕೊಡುತ್ತಾರಾ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನ ಕಾಯುತ್ತಿದ್ದಾರೆ.