ಹುಣಸೂರು: ಕೊಡಗು ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ತಾಲ್ಲೂ ಕಿನ ಲಕ್ಷ್ಮಣತೀರ್ಥ ನದಿಗೆ ಜೀವಕಳೆ ಬಂದಿದೆ. ಹನಗೋಡಿನಲ್ಲಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯಿಂದ ಭೋರ್ಗರೆಯುತ್ತ ಹರಿಯುತ್ತಿದ್ದು, ನೋಡುಗರ ಮನಸೂರೆಗೊಳ್ಳುತ್ತಿದೆ. ನಾಗರಹೊಳೆ ಉದ್ಯಾನದಿಂದ ಹರಿದುಬರುವ ಲಕ್ಷ್ಮಣತೀರ್ಥ ನದಿ ಹನಗೋಡು ಹೋಬಳಿ ತಲುಪುವ ವರೆಗೂ ಶುದ್ಧವಾಗಿದ್ದು, ನಂತರದಲ್ಲಿ ಕಲುಷಿತ ನೀರು ಸೇರಿ ನದಿ ನೀರು ಕಲುಷಿತವಾಗಿದೆ.
ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ನದಿ ಬುಧವಾರ ರಾತ್ರಿ ಒಳಹರಿವು ಹೆಚ್ಚಳದಿಂದ ನದಿಯಲ್ಲಿ ಹೆಪ್ಪುಗಟ್ಟಿ ನಿಂತಿದ್ದ ತ್ಯಾಜ್ಯ ಕೊಚ್ಚಿ ಹೋಗಿದೆ. ಪರಿಣಾಮವಾಗಿ ಕಟ್ಟೆಮಳಲ ವಾಡಿ ಅಣೆಕಟ್ಟೆ ಬಳಿ ನದಿ ನೀರಿನಲ್ಲಿ ನೊರೆ ಸೃಷ್ಟಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನದಿ ಪಾತ್ರದ ಕೆಳಭಾಗದ ಗ್ರಾಮಸ್ಥರು ಲಕ್ಷ್ಮಣತೀರ್ಥ ನದಿ ನೀರು ಬಳಸಬಾರದು. ಕಲುಷಿತ ನೀರು ಸೇರಿರುವುದರಿಂದ ನೊರೆ ಉತ್ಪತ್ತಿಯಾಗುತ್ತಿದೆ. ಬೆಂಗಳೂರಿನ ವರ್ತೂರು ಕೆರೆಯಲ್ಲಿ ಉಂಟಾಗುವಂತೆ ಇಲ್ಲಿಯೂ ನೊರೆ ಸೃಷ್ಟಿಯಾಗಿದೆ. ಹೀಗಾಗಿ, ಈ ನೀರು ಬಳಸಲು ಯೋಗ್ಯವಲ್ಲ ಎಂದು ಲಕ್ಷ್ಮಣತೀರ್ಥ ನದಿ ಉಳಿಸಿ ಹೋರಾಟ ಸಮಿತಿ ಸದಸ್ಯ ಡಾ.ಎಸ್.ಶ್ರೀಕಾಂತ್ ತಿಳಿಸಿದ್ದಾರೆ.
ಒಳಚರಂಡಿ ವ್ಯವಸ್ಥೆ ಕಲ್ಪಿಸುವವರೆಗೂ ನಗರ ವ್ಯಾಪ್ತಿಯ ತ್ಯಾಜ್ಯ ನೀರು ನದಿ ತಲುಪುವುದು ತಪ್ಪಿಸಲು ಸಾಧ್ಯ ವಿಲ್ಲ. ಆದ್ದರಿಂದ ಕ್ಷೇತ್ರದ ಜನಪ್ರತಿನಿಧಿಗಳು ತ್ವರಿತಗತಿಯಲ್ಲಿ ಕ್ರಮ ತೆಗೆದು ಕೊಂಡು ಲಕ್ಷ್ಮಣತೀರ್ಥ ನದಿ ಉಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ನದಿ ನೀರು ವ್ಯರ್ಥವಾಗಲು ಬಿಡದೆ, ಕೆರೆಗಳಿಗೆ ತುಂಬಿಸಬೇಕು. ಈ ನಿಟ್ಟಿನಲ್ಲಿ ಹಾರಂಗಿ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಹನಗೋಡು ಅಣೆಕಟ್ಟೆ ನಾಲೆಗಳ ಮೂಲಕ ರತ್ನಾಪುರಿ, ಧರ್ಮಾಪುರ, ಅಸ್ವಾಳು, ಕರಿಮುದ್ದನ ಹಳ್ಳಿ, ಬಿಳಿಕೆರೆ, ಸಿಂಗರಮಾರನಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಸ್ವಾಳು ಶಂಕರೇಗೌಡ ಮನವಿ ಮಾಡಿದ್ದಾರೆ.
ನಾಲೆ ಆಧುನೀಕರಣ ಕಾಮಗಾರಿ ಆರಂಭವಾಗದೆ ನೀರು ಪೋಲಾಗುತ್ತಿದೆ. ಈ ಬಗ್ಗೆ ಕ್ಷೇತ್ರದ ಶಾಸಕರ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಹನಗೋಡು ನಾಲಾ ಸರಣಿ ಆಧುನಿಕರಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರೂ ಕಾಮಗಾರಿ ಆರಂಭವಾಗದಿರುವುದು ದುರಂತ ಎಂದು ಅವರು ದೂರಿದ್ದಾರೆ.