ಗುಂಡ್ಲುಪೇಟೆ: ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನೂತನ ಪ್ರೌಢ ಶಾಲಾ ಕಟ್ಟಡ ನಿರ್ಮಿಸಿ, ಉದ್ಘಾಟನೆ ಮಾಡಿ ತಿಂಗಳಾದರೂ ತರಗತಿಗಳನ್ನು ಸ್ಥಳಾಂತರಿಸದ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ನೂತನ ಶಾಲಾ ಕಟ್ಟಡ ಇರುವಾಗ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲೇ ಪಾಠ ಪ್ರವಚನ ಮಾಡುತ್ತಿರುವುದನ್ನು ಖಂಡಿಸಿದ ಗ್ರಾಮಸ್ಥರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಸೆಳೆಯುವ ಸಲುವಾಗಿ ಶಾಲಾ ತರಗತಿಗೆ ಬೀಗ ಹಾಕಿ ಶನಿವಾರ ಪ್ರತಿಭಟನೆ ನಡೆಸಿದ್ದು, ಇದರಿಂದ ಮಕ್ಕಳು ಕೆಲಕಾಲ ರಸ್ತೆಬದಿ ಮರದ ಕೆಳಗೆ ಪಾಠ ಕೇಳುವಂತಾಗಿತ್ತು.
ಈಗಾಗಲೇ ಅಣ್ಣೂರುಕೇರಿ ಗ್ರಾಮದಲ್ಲಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಪ್ರೌಢ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಮುಗಿದರೂ ಗುತ್ತಿಗೆದಾರರು ಕೀಲಿ ಕೈ ಹಸ್ತಾಂತರಿಸದ ಪರಿಣಾಮವಾಗಿ ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ಆ ನಂತರ ಕಳೆದ ತಿಂಗಳು ಸಂಸದ ಹಾಗೂ ಶಾಸಕರು ಕಟ್ಟಡವನ್ನು ಉದ್ಘಾಟನೆ ನೆರವೇರಿಸಿದರು.
ಕಟ್ಟಡದ ಕಾಮಗಾರಿ ನಡೆಸುವ ಸಂದರ್ಭದಲ್ಲಿ ವಿದ್ಯುತ್ ಬಳಕೆಯ ಬಿಲ್ ಪಾವತಿಸಲು ನಿರಾಕರಿಸಿದ ಗುತ್ತಿಗೆದಾರ ಶಿಕ್ಷಣ ಇಲಾಖೆಗೆ ಕೀಲಿಕೈ ನೀಡಲು ಬಂದಾಗ ಬಿಲ್ ಪಾವತಿಸಿ ನಂತರ ನೀಡುವಂತೆ ಹೇಳಿದ್ದರಿಂದ ಕಟ್ಟಡ ನಿರ್ಮಾಣವಾಗಿದ್ದರೂ ಬಳಕೆಗೆ ಬಂದಿರಲಿಲ್ಲ. ಆದರೆ ತಿಂಗಳಾದರೂ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರಿಸದ ಪರಿಣಾಮವಾಗಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿತ್ತು. ನೂತನ ಕಟ್ಟಡವನ್ನು ಬಳಕೆಗೆ ತರುವಂತೆ ಪೋಷಕರು ಹಾಗೂ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಉಪಯೋಗವಾಗಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಹಳೆಯ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲಾ ಕೊಠಡಿಗಳಿಗೆ ಬೀಗಜಡಿದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಿದರು. ಪರಿಣಾಮವಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ದೇವಸ್ಥಾನದ ಮುಂದೆ ಕುಳ್ಳ್ಳರಿಸಿದ ಶಿಕ್ಷಕರು ಬಯಲಿನಲ್ಲಿಯೇ ಪಾಠಪ್ರವಚನ ಮಾಡಬೇಕಾಯಿತು.
ವಿಷಯ ತಿಳಿದ ತಾಲೂಕು ಕ್ಷೇತ್ರ ಶಿಕ್ಷಣಧಿಕಾರಿ ಸಿ.ಎನ್.ರಾಜು ಗ್ರಾಮದ ಶಾಲೆಗೆ ಭೇಟಿ ನೀಡಿದಾಗ ಸ್ಥಳೀಯರ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಗುತ್ತಿಗೆದಾರನು ನಿಯಮಾನುಸಾರ ಕೀಲಿಕೈ ಹಸ್ತಾಂತರ ಮಾಡದ ಕಾರಣದಿಂದ ನಾವು ನೂತನ ಕಟ್ಟಡ ಬಳಕೆ ಮಾಡಲಾಗುತ್ತಿಲ್ಲ ಎಂದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ನೀವು ಕೀಲಿಕೈ ಪಡೆದುಕೊಳ್ಳದಿದ್ದರೆ ನಾವೇ ಬೀಗ ಮುರಿದು ತರಗತಿಗಳನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಯಾವುದೇ ಕಾರಣಕ್ಕೂ ನಿಮ್ಮ ಸಬೂಬು ಕೇಳಲು ಸಿದ್ದರಿಲ್ಲ ಎಂದಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಮುಂದಾದ ಶಿಕ್ಪ್ಷಣಾಧಿಕಾರಿ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರನಿಂದ ಮೂರು ಕೊಠಡಿಗಳ ಕೀಲಿಕೈ ಪಡೆದು ತಾತ್ಕಾಲಿಕವಾಗಿ ತರಗತಿಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟರು.