ಗುಂಡ್ಲಪೇಟೆ: ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಲಾಗಿರುವ ಓವರ್ಹೆಡ್ ಟ್ಯಾಂಕ್ನಿಂದ ಪಕ್ಕದ ಜಮೀನಿಗೆ ಅಕ್ರಮ ನೀರು ಹಾಯಿಸಲಾಗುತ್ತಿದೆ ಎಂಬ ಆರೋಪ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ಕೇಳಿ ಬಂದಿದೆ.
ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ ಆದರೆ ಓವರ್ಹೆಡ್ ಟ್ಯಾಂಕ್ನಿಂದಲೇ ಸಮೀಪದ ಜಮೀನಿನವರು ಹತ್ತಿ ಬೆಳೆಗೆ ಅಕ್ರಮವಾಗಿ ನೀರು ಹಾಯಿಸಿಕೊಳ್ಳುತ್ತಿದ್ದು, ಇದರಿಂದ ನೀರಿಗೆ ತೊಂದರೆಯಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರವುಂಟಾಗಿದ್ದು, ಜನರು ಪರಿತಪಿಸುವಂತಾಗಿದೆ. ಮಳೆ ಕೈಕೊಟ್ಟು ಅಂತರ್ಜಲ ಬತ್ತಿರುವ ಈ ದಿನಗಳಲ್ಲಿ ಗ್ರಾಮದ ಜನರಿಗೆ ಸಮರ್ಪಕವಾಗಿ ನೀರೊದಗಿಸದ ನೀರುಗಂಟಿ ನೀರು ಪೂರೈಕೆಯ ಬಗ್ಗೆ ಕೇಳಿದರೆ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಆದರೆ ಹಣದಾಸೆಗಾಗಿ ಪ್ರತಿ ರಾತ್ರಿ ಅಕ್ರಮವಾಗಿ ಟ್ಯಾಂಕ್ ಸಮೀಪದ ಜಮೀನಿನಲ್ಲಿ ಬೆಳೆದಿರುವ ಹತ್ತಿ ಬೆಳೆಗೆ ನೀರು ಹಾಯಿಸುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ ಈ ಕುರಿತು ವಿಚಾರಿಸಿದಾಗ ಟ್ಯಾಂಕ್ನ್ನುಶುಚಿಗೊಳಿಸುವ ಸಲುವಾಗಿ ಟ್ಯಾಂಕ್ನಲ್ಲಿದ್ದ ನೀರನ್ನು ಖಾಲಿಮಾಡಲಾಗುತ್ತಿದೆ ಎಂದು ನೀರು ಗಂಟಿ ಸಬೂಬು ನೀಡುತ್ತಿದ್ದಾನೆ ಎಂದು ಗ್ರಾಮದ ಸ್ವಾಮಿಗೌಡ, ಶಿವಣ್ಣೇಗೌಡ, ಶಿವರಾಜು, ಮಹದೇವಶೆಟ್ಟಿ, ಮನು ಎಂಬುವವರು ದೂರಿದ್ದು ಕೂಡಲೇ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಸ್ವಾಮಿ ಪರಿಶೀಲಿಸಿ ನೀರುಗಂಟಿ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.