News Kannada
Monday, September 26 2022

ಕರ್ನಾಟಕ

ಶಿವ-ಗಂಗೆಯ ಕಲ್ಯಾಣೋತ್ಸವಕ್ಕೆ ಹಾಲಕ್ಕಿ, ಅಂಬಿಗರ ದಿಬ್ಬಣ…! - 1 min read

Photo Credit :

ಶಿವ-ಗಂಗೆಯ ಕಲ್ಯಾಣೋತ್ಸವಕ್ಕೆ ಹಾಲಕ್ಕಿ, ಅಂಬಿಗರ ದಿಬ್ಬಣ...!

ಕಾರವಾರ: ಇದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬೇಲೆಹಿತ್ತಲಿನಲ್ಲಿ ಗಂಗಾವಳಿ ಭಾಗದ ಅಂಬಿಗರು ಗಂಗಾಮಾತೆ ಮತ್ತು ಗೋಕರ್ಣ ಸೀಮೇಯ ಹಾಲಕ್ಕಿ ಒಕ್ಕಲಿಗರು ಮಹಾಬಲೇಶ್ವರನನ್ನು ತಂದು ಅತೀ ವಿಜೃಂಭಣೆಯಿಂದ ಶಿವಗಂಗೆಯ ವಿವಾಹವೋತ್ಸವ ಆಚರಿಸಿದರು.

ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಅ.12ರಂದು ಗಂಗಾಷ್ಟಮಿಯ ಪರ್ವಕಾಲದಲ್ಲಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ನಡೆಯಿತು. ಬುಧವಾರ ನರಕ ಚತುರ್ದಶಿಯ ದಿನ ಶಿವಗಂಗಾಯ ವಿವಾಹವನ್ನು ಅದ್ಧೂರಿಯಾಗಿ ನಡೆಸಿದರು.

ಐತಿಹಾಸಿಕ ಹಿನ್ನೆಲೆ
ಆದಿಯಲ್ಲಿ ಲಂಕಾಧಿಪತಿ ರಾವಣನು ಕೇವಲ ತನ್ನ ತಾಯಿಯ ಇಚ್ಛೆ ಪೂರೈಸಲು ಪರಶಿವ ಆತ್ಮಲಿಂಗವನ್ನು ಪಡೆದು ಲಂಕೆಗೆ ಒಯ್ಯುವ ಸಮಯದಲ್ಲಿ ದೇವಾನುದೇವತೆಗಳ ಪ್ರಾರ್ಥನೆಯಂತೆ ವಿಘ್ನೇಶ್ವರನು ಶಿವಲಿಂಗವು ಗೋಕರ್ಣ ಸೀಮೆಯಲ್ಲಿ ಶ್ರೀ ಮಹಾಬಲೇಶ್ವರನಾಗಿ ನೆಲೆಸುವಂತೆ ಮಾಡಿದ ಕಥೆಯಿದೆ.

ಅದೇ ರೀತಿ ಶಿವನ ಶಿರದಲ್ಲಿರುವ ಗಂಗೆಯು ಶಿವನ ಸಾನಿಧ್ಯದಲ್ಲಿ ನೆಲೆಸಲು ಬಲೆ ಬೀಸಿ ಮೀನು ಹಿಡಿದು ಜೀವನ ನಡೆಸುವ ಅಂಬಿಗರ ಬಲೆಗೆ ಗಂಗವಳಿ ಸಮೀಪದ ಸಮುದ್ರದಲ್ಲಿ ಮೂರ್ತಿ ರೂಪದಲ್ಲಿ ಸಿಗುತ್ತದೆ. ಅಂಬಿಗರು ಮೂರ್ತಿಯನ್ನು ಭಕ್ತಿಯಿಂದ ಗೋಕರ್ಣ ಸಮೀಪದ ಗಂಗಾವಳಿಯಲ್ಲಿ ಪ್ರತಿಷ್ಠಾಪಿಸಿ ತಮ್ಮ ಕುಲದೇವತೆಯಾಗಿ ಅನಾದಿ ಕಾಲದಿಂದ ಪೂಜಿಕೊಳ್ಳುತ್ತಾ ಬಂದಿದ್ದಾರೆ. ಗೋಕರ್ಣದಲ್ಲಿ ನೆಲೆಸಿರುವ ಶ್ರೀ ಮಹಾಬಲೇಶ್ವರ ತನ್ನ ಪರಿವಾರದೊಂದಿಗೆ ದಸರಾ ಹಬ್ಬದ ಸಂದರ್ಭದಲ್ಲಿ (ಹೊಸ್ತಿನ ಹಬ್ಬ/ಕದಿರ ಹಬ್ಬ) ಮಾಸ್ಕೇರಿ ಸೀಮೆಗೆ ಬಂದಾಗ ಚೆಲುವೆಯೂ, ಸೌಂದರ್ಯವತಿಯೂ ಆದ ಗಂಗೆಯ ರೂಪ, ಲಾವಣ್ಯಕ್ಕೆ ಮನಸೋತು ಅವಳನ್ನು ಮದುವೆಯಾಗಲು ನಿಶ್ಚಿಯಿಸುತ್ತಾನೆ.

ಆದರೆ ಆಗಲೇ ಗೌರಿಯನ್ನು ಮದುವೆಯಾಗಿರುವ ಮಹಾಬಲೇಶ್ವರನು ಗಂಗೆಯನ್ನು ಬಿಡಲಾಗದೇ, ಗೌರಿಗೆ ತಿಳಿಯದ ರೀತಿಯಲ್ಲಿ ಗಂಗೆಯನ್ನು ಮದುವೆಯಾಗಲು, ಗೌರಿಯು ಗಾಢ ನಿದ್ರೆಯಲ್ಲಿರುವಾಗ ಕೃಷ್ಣ ಪಕ್ಷ ಅಷ್ಟಮಿಯ ಮಧ್ಯರಾತ್ರಿ ಕತ್ತಲೆಯಲ್ಲಿ ಸಮುದ್ರ ದಂಡೆಯಲ್ಲಿ ಪರಿವಾರದೊಂದಿಗೆ ನಡೆದು ಬರುತ್ತಾನೆ. ಗಂಗೆಕೊಳ್ಳದಲ್ಲಿ ಈ ಸಂದರ್ಭದಲ್ಲಿ ಉತ್ತರದ ಗಂಗೆಯು ಉಕ್ಕುತ್ತಾಳೆಂಬುದು ಹಾಗೂ ಮಹಾಬಲೇಶ್ವರ ಸ್ನಾನ ಮಾಡುವ ಸಂದರ್ಭದಲ್ಲಿ ಆ ಭಾಗದ ನೀರು ಸಿಹಿಯಾಗುತ್ತದೆ ಎಂದು ಪೂಜೆಗಾಗಿ ಸ್ವೀಕರಿಸಿದ ಒಂದು ಬಿಂದಿಗೆ ನೀರು ಸಿಹಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಸ್ನಾನ ಕಾರ್ಯಗಳನ್ನು ಪೂರೈಸಿ ಕತ್ತಲಿರುವಾಗಲೇ ಗಂಗಾದೇವಿ ನೆಲೆಸಿರುವ ದೇವಸ್ಥಾನಕ್ಕೆ ಶಿವ ಬರುತ್ತಾನೆ. ಶಿವನ ಬರುವಿಕೆಯನ್ನು ಅರಿತ ಗಂಗೆಯು ತಾನೊಬ್ಬಳೇ ಇಲ್ಲಿರುವುದರಿಂದ ಪರಪುರುಷನಾದ ಶಿವನು ಒಳ ಪ್ರವೇಶಿಸದಂತೆ ಬಾಗಿಲು ಹಾಕುತ್ತಾಳೆ. ಮಾರುವೇಷದಲ್ಲಿರುವ ಶಿವನು ತನ್ನ ಪರಿಚಯವನ್ನು ತನಗಿರುವ ವಿವಿಧ ನಾಮಾಂಕಿತಗಳೊಂದಿಗೆ ಅರಹುತ್ತಾ ನಾನಾ ಪರಿಯಾಗಿ ಹೇಳುತ್ತಾನೆ. ಅವನ ಯಾವ ಮಾತಿಗೂ ಗಂಗೆಯು ಒಪ್ಪದಿರಲು ತಾನು ನಿಜವಾದ ಶಿವನೆಂದೂ, ಮಹಾಬಲೇಶ್ವರನಾಗಿ ಗೋಕರ್ಣದಲ್ಲಿ ನೆಲೆಸಿರುವ ಬಗ್ಗೆ ತಿಳಿಸುತ್ತ ತನ್ನ ನಿಜ ರೂಪದ ಪರಿಚಯ ತೋರಿಸಲು ಬಾಗಿಲು ತೆರೆಯುತ್ತಾಳೆ.

ಬಳಿಕ ಗಂಗೆ ಶಿವನೊಂದಿಗೆ ವಿವಾಹವಾಗಲು ಒಪ್ಪಿಗೆ ಸೂಚಿಸುತ್ತಾಳೆ. (ಶಿವ ಗಂಗೆಯರ ಸಂವಾದವನ್ನು ಬ್ರಾಹ್ಮಣೋತ್ತಮರು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ನೆಲೆನಿಂತ ಭಕ್ತರಿಗೆ ತಿಳಿಯುವಂತೆ ನಡೆಸಿ ಕೊಡುತ್ತಾರೆ.) ಮುಂದೆ ಅಶ್ವಿನಿ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಮತ್ತು ಗಂಗಾವಳಿ ಮಧ್ಯ ಸಮುದ್ರ ದಂಡೆಯ ಮೇಲೆ ಶಿವ ಗಂಗೆಯರ ವಿವಾಹ ನೆರವೇರುವುದೆಂದು ನಿಶ್ಚಯವಾಗುತ್ತದೆ ಎನ್ನುವುದು ಇತಿಹಾಸ.

See also  ಕೊಡಗಿನ ಸಿಂಪಲ್ ಕೂವಲೆ ಹಿಟ್ಟು

ಇತಿಹಾಸ ಅಂದಿನ ದಿನದಿಂದ ಇಂದಿನವರೆಗೆ ಅದೇ ಸಂಪ್ರದಾಯವನ್ನು ಇಲ್ಲಿನ ಅಂಬಿಗ ಹಾಗೂ ಹಾಲಕ್ಕಿ ಒಕ್ಕಲಿಗರೂ ನಡೆಸಿಕೊಂಡು ಬಂದಿದ್ದಾರೆ. ಶಿವಗಂಗೆಯ ವಿವಾಹ ಮಹೋತ್ಸವಕ್ಕೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು