News Kannada
Monday, September 26 2022

ಕರ್ನಾಟಕ

ಕೊಡಗಿನಲ್ಲಿ ಮುಂದುವರಿದ ವರುಣನ ಅರ್ಭಟ: ನಾಳೆಯೂ ಶಾಲೆಗೆ ರಜೆ - 1 min read

Photo Credit :

ಕೊಡಗಿನಲ್ಲಿ ಮುಂದುವರಿದ ವರುಣನ ಅರ್ಭಟ: ನಾಳೆಯೂ ಶಾಲೆಗೆ ರಜೆ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಗಾಳಿ, ಮಳೆಯ ಆರ್ಭಟ ಮುಂದುವರೆದಿದ್ದು, ಮರವೊಂದು ಜಿಲ್ಲಾಧಿಕಾರಿಗಳ ಮನೆಯ ಮೇಲೆ ಬಿದ್ದು ಹಾನಿಯುಂಟಾದ ಘಟನೆ ನಡೆದಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ನೀರು ರಸ್ತೆಯನ್ನು ಆವರಿಸಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಜಿಲ್ಲೆಯಾದ್ಯಂತ ಹೆಚ್ಚಿದ್ದು, ಕಾವೇರಿಯ ಉಗಮಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಯಾಗುತ್ತಿದೆ. ಭಾಗಮಂಡಲ ಮತ್ತು ಅಯ್ಯಂಗೇರಿ ರಸ್ತೆಗಳ ಮೇಲೆ ನದಿ ನೀರು ಹರಿಯಲಾರಂಭಿಸಿದ್ದು, ಕಾವೇರಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.

ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನ ಅವಧಿಯವರೆಗೆ ತಲಕಾವೇರಿಯಲ್ಲಿ ಸರಿ ಸುಮಾರು 7 ಇಂಚು ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ 6.50 ಇಂಚು ಮಳೆಯಾಗಿದ್ದು, ಕ್ಷೇತ್ರ ವ್ಯಾಪ್ತಿಯ ಚೆಟ್ಟಿಮಾನಿ, ಚೇರಂಗಾಲ, ಕೋರಂಗಾಲ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ಕೇಶಮುಂಡನ ಮತ್ತು ಬಟ್ಟೆ ಬದಲಿಸುವ ಕಟ್ಟಡ ನದಿ ನೀರಿನಿಂದ ಆವೃತ್ತವಾಗಿದೆ.

ಕಾವೇರಿ ನದಿ ಹರಿದು ಹೋಗುವ ನಾಪೋಕ್ಲು, ಮೂರ್ನಾಡು, ಸಿದ್ದಾಪುರ, ಕುಶಾಲನಗರ ವ್ಯಾಪ್ತಿಯಲ್ಲು ಭಾರೀ ಮಳೆಯಾಗುತ್ತಿದ್ದು, ಮೂರ್ನಾಡು ಬಲಮುರಿಯ ಹಳೆಯ ಸೇತುವೆ ಮುಳುಗಡೆಯಾಗಿದ್ದರೆ, ಸಿದ್ದಾಪುರದ ಕರಡಿಗೋಡು, ನೆಲ್ಯಹುದಿಕೇರಿಯ ಎಡದಂಡೆ ಮತ್ತು ಬಲದಂಡೆಯಲ್ಲಿರುವ ನಿವಾಸಿಗಳು ಪ್ರವಾಹದ ಭೀತಿಗೆ ಸಿಲುಕಿದ್ದಾರೆ. ಈಗಾಗಲೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಶಾಲಾ ಕಾಲೇಜುಗಳಿಗೆ ನಾಳೆ ರಜೆ: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಅಂಗನವಾಡಿಗಳು ಸೇರಿದಂತೆ ಶಾಲಾ ಕಾಲೇಜುಗಳಿಗೆ ಜೂ.11 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಭಾಗಮಂಡಲಕ್ಕೆ ಡಿಸಿ ಭೇಟಿ: ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭಾಗಮಂಡಲಕ್ಕೆ ಭೇಟಿ ನೀಡಿ ಜಲಾವೃತಗೊಂಡಿರುವ ಪ್ರದೇಶಗಳನ್ನು ಪರಿಶೀಲಿಸಿದರು. ಪ್ರವಾಹದಿಂದ ಕಷ್ಟ, ನಷ್ಟಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಂತರ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಜಿಲ್ಲಾಧಿಕಾರಿ ವಿಶೇಷ ಪೂಜೆ ಸಲ್ಲಿಸಿದರು.

ಭಾಗಮಂಡಲದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ದಳ ಸನ್ನದ್ಧವಾಗಿದೆ. ಪ್ರವಾಹ ಮುನ್ಸೂಚನೆಯ ಹಿನ್ನೆಲ್ಲೆಯಲ್ಲಿ ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ಡಿಸಿ ಮನೆ ಮೇಲೆ ಬಿತ್ತು ಮರ: ಮಡಿಕೇರಿ ನಗರದ ಫೀ.ಮಾ.ಕಾರ್ಯಪ್ಪ ವೃತ್ತದ ಬಳಿ ಇರುವ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿ ಶನಿವಾರ ತಡ ರಾತ್ರಿ ಎರಡು ಮರಗಳು ಉರುಳಿ ಬಿದ್ದಿವೆ. ಘಟನೆಯಿಂದ ಜಿಲ್ಲಾಧಿಕಾರಿ ಕಾವಲು ಸಿಬ್ಬಂದಿ ಕೋಣೆ ಸಂಪೂರ್ಣವಾಗಿ ಜಖಂಗೊಂಡಿದ್ದು, ಜಿಲ್ಲಾಧಿಕಾರಿ ನಿವಾಸಕ್ಕೂ ಒಂದಷ್ಟು ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಧರೆಗುರುಳಿದ ಮರಗಳ ತೆರವು ಕಾರ್ಯಾಚರಣೆಯನ್ನು ನಡೆಸಿದರು.

ಬರೆಗಳ ಕುಸಿತ: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಸೇರಿದಂತೆ ಸೋಮವಾರಪೆಟೆ, ವೀರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮಳೆಯಿಂದ ಮರ ಹಾಗೂ ಬರೆಗಳು ಧರೆಗುರುಳಿರುವ ಘಟನೆ ನಡೆದಿದೆ.

See also  ಭೀಕರ ಅಪಘಾತ: ಐದು ಮಂದಿ ದಾರುಣ ಸಾವು

ಮಡಿಕೇರಿ ನಗರದಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟು ನೀರು ನಿಂತಿರುವುದರಿಂದ ವಾಹನಗಳ ಸಂಚಾರ ದುಸ್ತರವೆನಿಸಿದೆ.

ದಕ್ಷಿಣ ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಬಾಳೆಲೆ, ಕಾನೂರು ವಿಭಾಗಗಳಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಲಕ್ಷ್ಮಣ ತೀರ್ಥ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನದಿ ಪಾತ್ರದ ಗದ್ದೆ ಬಯಲುಗಳು ನೀರಿನಿಂದ ಆವೃತ್ತವಾಗಿದೆ.

ಮಡಿಕೇರಿ ನಗರದಲ್ಲಿ ಮಳೆಯೊಂದಿಗೆ ಚಳಿಯೂ ಇದ್ದು, ಈ ಸುಂದರ ವಾತಾವರಣವನ್ನು ಸವಿಯಲು ಆಗಮಿಸಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಆದರೆ ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು ಕಾರ್ಗತ್ತಲಿನಲ್ಲಿದ್ದು, ಕೆಲಸ ಕಾರ್ಯಗಳು, ಹೊಟೇಲ್ ವ್ಯವಹಾರಗಳಿಗೂ ಅಡಚಣೆ ಉಂಟಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು