ಈಗ ಮಳೆಗಾಲ. ಕೊಡಗಿಗೊಂದು ಸುತ್ತು ಹೊಡೆದರೆ ಮನೆ ಮುಂದೆ ವಿವಿಧ ಬಣ್ಣಗಳ, ವೈವಿಧ್ಯಮಯ ಡೆಲೀಯಾ ಹೂಗಳು ಅರಳಿ ಕಂಗೊಳಿಸುತ್ತಿರುವುದು ಕಂಡು ಬರುತ್ತವೆ.
ಮಳೆಗಾಲದಲ್ಲಿ ಸುರಿಯುವ ಮಳೆಗೆ ಇತರೆ ಹೂಗಿಡಗಳು ಮುದುರಿಕೊಂಡಿದ್ದರೆ, ಡೆಲೀಯಾಗಳು ಮಾತ್ರ ಹೂಬಿಟ್ಟು ತಲೆದೂಗುತ್ತಿರುತ್ತವೆ. ಬಹಳಷ್ಟು ಮನೆಗಳಲ್ಲಿ ಹಿಂದಿನ ಕಾಲದ ತಳಿಗಳೊಂದಿಗೆ ಈಗಿನ ಹೈಬ್ರೀಡ್ ತಳಿಗಳಿದ್ದು, ಮನೆಯ ಮುಂದಿನ ಅಂಗಳ, ಕುಂಡಗಳು, ಹೂದೋಟ ಹೀಗೆ ಎಲ್ಲೆಂದರಲ್ಲಿ ಅವುಗಳು ಹೂಬಿಟ್ಟು ಕಂಗೊಳಿಸುತ್ತಿರುತ್ತವೆ.
ಕೊಡಗಿನ ಮಟ್ಟಿಗೆ ಹೇಳುವುದಾದರೆ ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲು ಗೊಂಚಲಾಗಿ ಹೂಬಿಟ್ಟು ಕಂಗೊಳಿಸುವುದು ಪ್ರತಿವರ್ಷವೂ ನಡೆಯುತ್ತಿರುತ್ತವೆ.
ಕೊಡಗಿಗೂ ಡೆಲೀಯಾಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮನೆಗಳಲ್ಲಿ ಯಾವುದಾದರೊಂದು ಬಗೆಯ ಡೆಲೀಯಾ ಹೂಗಿಡ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಈ ಹೂವೇ ಮನೆಗೆ ಶೋಭೆ ಎಂದರೂ ತಪ್ಪಾಗಲಾರದು.
ಡೆಲೀಯಾದಲ್ಲಿ ಸುಮಾರು ಹತ್ತುಬಣ್ಣಗಳಿದ್ದು, ಒಂದೊಂದು ಬಣ್ಣದಲ್ಲಿಯೂ ಹಲವಾರು ತಳಿಗಳಿವೆ. ಹಳದಿ ಬಣ್ಣದಲ್ಲಿ ಅಲ್ವಾಸ್ ಸುಪ್ರೀಮ್, ಸನ್ಬಸ್ಟರ್ ಕೆನ್ಯಾಯಲೋ, ಕ್ವೀನ್ ಎಲಿಜಬೆತ್, ದೇವನ್ಪೋರ್ಟ್, ಸನ್ಲೈಟ್, ಗಿನಿ, ಗೋಲ್ಡನ್ ಸ್ಟಾರ್, ಕಿತ್ತಳೆ ಬಣ್ಣದಲ್ಲಿ ಕಿಂಗ್ ಸಕರ್, ಮಾಂಡರಿನ್, ನೆಪೋಲಿನ್, ಕೆಂಪುಬಣ್ಣಗಳಲ್ಲಿ ಬಾರ್ಬರಾ ಮಾರ್ಷಲ್, ಅಲ್ಡನ್ ಗ್ಯಾಲಕ್ಸಿ ಸೂಪರ್, ಬ್ಯಾಂಕರ್ ಇಸ್ಟೀಡರ್, ವಿಲೋ ನೈಟ್, ಮಾರ್ಷ್, ನೀಲಿ ಬಣ್ಣದಲ್ಲಿ ನಿಯರೆಸ್ಟ್ ಬ್ಲೂ ರಿಸ್ಕಾ ಮೈನರ್, ಐರಿಸ್, ಮೂರ್ಪ್ಲೇಸ್, ವಿಲೋವೈಲೆಟ್, ಗುಲಾಬಿ ಬಣ್ಣದಲ್ಲಿ ಐಲ್ಯಾಂಡರ್, ಏಪ್ರಿಲ್ಡಾನ್, ಪಿಂಕ್ಜುಪಿಟರ್, ಸುಲ್ತಾನ್, ಸ್ಲೋಹಿಲ್ ರೋಜ್, ಫಿಂಕ್ ಜಿರಾಫೆ, ಬಿಳಿಬಣ್ಣದಲ್ಲಿ ಸಿಲ್ವರ್ ಸಿಟಿ, ಕಾರ್ಟನ್ ಲಿಂಡಾ, ನೀನಾ ಚೆಸ್ಟರ್, ಡೇಟ್ವೇ, ಈಸ್ಟ್ವುಡ್ ಸ್ನೋ, ಲೇಸ್ಮೇಕರ್, ಪೊರ್ಸಲೀನ್, ಸ್ನೋಫಾಲ್, ಲಿಟಲ್ಸ್ನೋಡ್ರಾಫ್, ಬೂದು ಬಣ್ಣದಲ್ಲಿ ಕ್ರೋಡಾನ್ ಜಂಬೋ, ಕಾಮೆಟ್, ಬಾದಾಮಿ ಬಣ್ಣದಲ್ಲಿ ಸಿಂಬಲ್, ಕ್ರೋಡಾನ್ ಮಾಸ್ಟರ್ಫೇಸ್, ಮಿಶ್ರಬಣ್ಣದಲ್ಲಿ ಡಿಸ್ನಿಲ್ಯಾಂಡ್, ಜೋತ್ಸ್ನಾ, ನೀತಾ, ಪೆನಾಮನನ್, ಕಾಂಪ್ಲಿಮೆಂಟ್ ಹೀಗೆ ನೂರಾರು ತಳಿಗಳಿದ್ದು, ಎಲ್ಲಾ ಹೂಗಳು ಒಂದಕ್ಕಿಂತ ಒಂದು ಸುಂದರವಾಗಿದ್ದು ನೋಡುಗರ ಗಮನಸೆಳೆಯುತ್ತವೆ.
ಡೆಲೀಯಾವನ್ನು ನೆಟ್ಟು ಬೆಳೆಸಲು ಮೇ ಅಥವಾ ಜೂನ್ ತಿಂಗಳು ಸೂಕ್ತವಾಗಿದ್ದು, ನೀರು ಬಸಿದು ಹೋಗುವ ಮಣ್ಣು, ಚೆನ್ನಾಗಿ ಬಿಸಿಲು ಬೀಳುವ ತಂಪಾದ ವಾತಾವರಣ ಉತ್ತಮವಾಗಿದ್ದು, ಡೇಲಿಯಾದ ಸಸ್ಯಾಭಿವೃದ್ಧಿಯನ್ನು ಗೆಡ್ಡೆಗಳಿಂದ ಹಾಗೂ ಕಾಂಡಗಳಿಂದ ಮಾಡಬಹುದಾಗಿದೆ. ಹೂಗಳು ಬಿಡುವ ಸಂದರ್ಭದಲ್ಲಿ ಗಿಡಕ್ಕೆ ಆಧಾರವಾಗಿ ಕೋಲನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಗಿಡವು ಹೂವಿನ ಭಾರಕ್ಕೆ ಮುರಿದು ಬೀಳುವುದನ್ನು ತಪ್ಪಿಸಬಹುದು. ಗಿಡನೆಟ್ಟು ಎರಡು ತಿಂಗಳೊಳಗೆ ಹೂಬಿಡಲಾರಂಭಿಸುತ್ತವೆ. ಒಂದು ಗಿಡ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹೂಗಳನ್ನು ಬಿಡುತ್ತದೆ.
ಕೊಡಗಿನಲ್ಲಿ ಯಾರೂ ಕೂಡ ಡೇಲಿಯಾವನ್ನು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ. ಇದು ಇತರೆ ಪುಷ್ಪಗಿಡಗಳ ನಡುವೆ ಸ್ಥಾನಗಿಟ್ಟಿಸಿಕೊಂಡು ಮಳೆಗಾಲದಲ್ಲಿ ಅರಳಿ ಕಂಗೊಳಿಸುತ್ತಾ ಬಳಿಕ ಸೊರಗಿ ಸಾಯುವುದು ಮಾಮೂಲಿಯಾಗಿದೆ.