ಕಾರವಾರ: ಯುವತಿಯೊಬ್ಬಳು ಎರಡು ಬಾರಿ ಮದುವೆಯಾಗಿದ್ದು ಕಾನೂನು ಬಾಹಿರವಾಗಿ ಎರಡನೇ ಬಾರಿಯೂ ವಿವಾಹ ನೋಂದಣಿಯಾದ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಅಂಕೋಲಾ ತಾಲೂಕಿನ ಸುಂಕಸಾಳ ನಿವಾಸಿ ಗಣಪತಿ ಭಟ್ ಎನ್ನುವವರು 2017ರ ಅಕ್ಟೋಬರ್ 15ರಂದು ಕಾರವಾರ ತಾಲೂಕಿನ ಅಮದಳ್ಳಿಯ ವೀರಗಣಪತಿ ದೇವಸ್ಥಾನದಲ್ಲಿ ಯಲ್ಲಾಪುರದ ಯುವತಿಯನ್ನು ವಿವಾಹವಾಗಿದ್ದರು.
ಇವರಿಬ್ಬರದ್ದು ಪ್ರೇಮ ವಿವಾಹವಾಗಿತ್ತು. ಅದರ ಬಳಿಕ ಕಾರವಾರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2018ರ ಫೆ.7ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು. ವಿಷಯ ತಿಳಿದ ಯುವತಿಯ ಮನೆಯವರು ಸಂಪ್ರದಾಯದಂತೆ ಮದುವೆ ಮಾಡಿಸುತ್ತೇವೆ. ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದರು. ಇದರಿಂದ ನಿರಾಳನಾಗಿದ್ದ ಯುವಕ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರಿಂದ ತನ್ನ ಪತ್ನಿಯಿಂದ ಸ್ವಲ್ಪ ದಿನ ದೂರವಿದ್ದ. ಈ ಮಧ್ಯೆ ಆಕೆಗೆ ಪಾಲಕರು ಎರಡನೇ ಮದುವೆ ಮಾಡಿಸಿದ್ದು, ಯಲ್ಲಾಪುರ ನೋಂದಣಾಧಿಕಾರಿ ಈ ಎರಡನೇ ಮದುವೆಯನ್ನೂ ನೋಂದಣಿ ಮಾಡಿಸಿಕೊಂಡಿದ್ದಾರೆ.
2018ರ ಜು.19ರಂದು ಇದೇ ವಿವಾಹಿತೆಗೆ ಯಲ್ಲಾಪುರ ತಾಲೂಕಿನ ಮಾಗೋಡ ಮೇಲಿನ ತಾರೇಮನೆ ನಿವಾಸಿ ರಾಜೇಶ ಹೆಗಡೆ ಎಂಬುವವರಿಗೆ ಮದುವೆ ಮಾಡಿಸಲಾಗಿದೆ. ಈ ಮದುವೆಯನ್ನು ಇದೇ ವರ್ಷದ ಜು.23ರಂದು ಯಲ್ಲಾಪುರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ.
ಈಗ ಗಣಪತಿ ಭಟ್ ಹುಡುಗಿಯ ಮನೆಯವರು ತನಗೆ ಮೋಸ ಮಾಡಿ ಪತ್ನಿಗೆ ಇನ್ನೊಂದು ಮದುವೆ ಮಾಡಿಸಿದ್ದಾರೆ ಎಂದು ಗಣಪತಿ ಭಟ್ ಆರೋಪಿಸಿದ್ದು ನ್ಯಾಯಕ್ಕಾಗಿ ಎಸ್ಪಿ ಬಳಿ ತೆರಳಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.