News Kannada
Friday, January 27 2023

ಕರ್ನಾಟಕ

ಪ್ರವಾಸಿಗರೇ ಎಚ್ಚರ: ಕೊಡಗು ಪ್ರವಾಸ ಸದ್ಯ ಬೇಡ!

Photo Credit :

ಪ್ರವಾಸಿಗರೇ ಎಚ್ಚರ:  ಕೊಡಗು ಪ್ರವಾಸ ಸದ್ಯ ಬೇಡ!

ಕೊಡಗು: ಜಿಲ್ಲೆಯಲ್ಲಿ ಮಹಾಮಳೆ ಮುಂದುವರಿದಿದ್ದು, ಅತಿವೃಷ್ಟಿಯಿಂದ ಹಾನಿ ಹೆಚ್ಚುತ್ತಲೇ ಇದೆ. ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆ ಮತ್ತೆ ಕುಸಿದಿದ್ದು, ಮಣ್ಣು ರಸ್ತೆಯನ್ನು ಆವರಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಬೊಲೇರೊ ಜೀಪ್ ವೊಂದು ಬಲಬದಿಯ ಹೊಳೆಗೆ ಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎರಡು ದಿನಗಳ ಹಿಂದೆ ಮಲೆನಾಡು ಬಳಿ ಗುಡ್ಡ ಕುಸಿದ ಪರಿಣಾಮ ಬಿದ್ದಿರುವ ಮಣ್ಣಿನ ರಾಶಿಯ ತೆರವು ಕಾರ್ಯಾಚರಣೆ ಇನ್ನೂ ಪೂರ್ಣಗೊಂಡಿಲ್ಲ. ಮಣ್ಣು ತೆಗೆದಂತೆ ಗುಡ್ಡ ಕುಸಿಯುತ್ತಿರುವುದಲ್ಲದೆ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಸುಮಾರು ಏಳು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಮಡಿಕೇರಿ ನಗರದ ಇಂದಿರಾನಗರ ಬಡಾವಣೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳ ಮೇಲೆ ಬರೆ ಕುಸಿದು ಬಿದ್ದು, ಅಪಾಯದ ಮುನ್ಸೂಚನೆ ಎದುರಾಗಿದೆ. ಮತ್ತಷ್ಟು ಮನೆಗಳು ಅಪಾಯದಂಚಿನಲ್ಲಿದ್ದು, ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಕೆಲವು ನಿವಾಸಿಗಳಿಗೆ ನಗರಸಭೆ ಸೂಚನೆ ನೀಡಿದೆ. ತಾಳತ್ತಮನೆಯ ತೋಟವೊಂದರಲ್ಲಿ ಭಾರೀ ಗಾಳಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಲ್ಲನ ಅಮ್ಮವ್ವ ಎಂಬುವವರು ಮೃತಪಟ್ಟಿದ್ದಾರೆ. ಅಂತರ್ಜಲಮಟ್ಟ ಹೆಚ್ಚಾಗಿ ಹಟ್ಟಿಹೊಳೆ ರಸ್ತೆ ಮಧ್ಯಭಾಗದಲ್ಲಿ ಕುಸಿದು ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಜೀವನದಿ ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದರೆ, ಮಳೆÉಯಾರ್ಭಟಕ್ಕೆ ಕುಸಿಯುತ್ತಿರುವ ಗುಡ್ಡಗಳಿಂದ ಹಲವು ಕುಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆಗಳಲ್ಲಿ ರಸ್ತೆಗಳು ಬಿರುಕು ಬಿಟ್ಟು ಬರೆಕುಸಿದು ವಾಹನ ಸಂಚಾರ ಅಸಾಧ್ಯವಾಗಿದೆ. ಭಾರೀ ಮಳೆಯಿಂದ ಮರಗಳು, ವಿದ್ಯುತ್ ಕಂಬಗಳು ಅಲ್ಲಲ್ಲಿ ಧರೆಗುರುಳಿದ್ದು, ನಗರದ ಸಮೀಪದ ತಾಳತ್‍ಮನೆಯ ಕಾಫಿ ತೋಟದಲ್ಲಿ ಗಾಳಿ ಮಳೆಗೆ ಬಿದ್ದಿದ್ದ ವಿದ್ಯುತ್ ತಂತಿಯ ಸ್ಪರ್ಶದಿಂದ ಮಲ್ಲನ ಅಮ್ಮವ್ವ ಎಂಬವರು ಸಾವನ್ನಪ್ಪಿದ್ದಾರೆ.

ಕಾವೇರಿ ಸನ್ನಿಧಿಯಲ್ಲಿ ಪ್ರವಾಹ:ಕಳೆದೊಂದು ದಿನದ ಅವಧಿಯಲ್ಲಿ ತಲಕಾವೇರಿ ಮತ್ತು ಭಾಗಮಂಡಲ ವಿಭಾಗದಲ್ಲಿ 10 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಭಾಗಮಂಡಲದ ಮಡಿಕೇರಿ ಮತ್ತು ಅಯ್ಯಂಗೇರಿ ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.

ಗ್ರಾಮಸ್ಥರ ಸಂಚಾರ ವಿರಳವಾಗಿದ್ದರೂ ಮುಂಜಾಗೃತಾ ಕ್ರಮವಾಗಿ ರ್ಯಾಫ್ಟಿಂಗ್ ಹಾಗೂ ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ಕಿರುತೊರೆಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವಾರು ಗ್ರಾಮಗಳು ಜಲಾವೃತಗೊಂಡು ಆತಂಕ ಸೃಷ್ಟಿಯಾಗಿದೆ. ಮುಕ್ಕೋಡ್ಲು, ಹಮ್ಮಿಯಾಲ ಸುತ್ತಮುತ್ತಲ್ಲ ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಪಟ್ಟಿದ್ದು, ಮುಕ್ಕೋಡ್ಲುವಿನ ನಾಪಂಡ ರವಿ ಕಾಳಪ್ಪ ಎಂಬುವವರ ಒಂದೂವರೆ ಎಕರೆಯಷ್ಟು ಕಾಫಿ ತೋಟ ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಕುಸಿದು ಹೋಗಿದೆ. ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.

ಸುಂಟಿಕೊಪ್ಪ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಕೆದಕಲ್ ಬಳಿ ರಸ್ತೆ ಕುಸಿಯುತ್ತಿದ್ದು, ವಾಹನ ಚಾಲಕರಿಗೆ ಪೊಲೀಸರು ಮುನ್ನೆಚ್ಚರಿಕೆಯನ್ನು ನೀಡುತ್ತಿದ್ದಾರೆ. ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ವಾಹನಗಳ ಸಂಚಾರ ಮತ್ತು ವೇಗವನ್ನು ನಿಯಂತ್ರಿಸಲಾಗುತ್ತಿದೆ. ಪ್ರವಾಸಿಗರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಮಡಿಕೇರಿ ಭಾಗಕ್ಕೆ ತೆರಳದಂತೆ ಸೂಚಿಸಲಾಗುತ್ತಿದೆ.

See also  ಸೋಮವಾರಪೇಟೆಯಲ್ಲಿ ಗಾಳಿ ಮಳೆಗೆ ಧರೆಗುರುಳಿದ ಮರ

2000 ಕೋಳಿಗಳು ನೀರು ಪಾಲು: ಕೊಡಗು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಮತ್ತು ಹಾರಂಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿ ಹೆಬ್ಬಾಲೆಯ ಕೊಲ್ಲಿ ಹಾಗೂ ಕೂಡಿಗೆ-ಕಣಿವೆ ಮಧ್ಯೆ ರಸ್ತೆಯ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ನದಿ ತಟದ ಅಕ್ಕಪಕ್ಕದಲ್ಲಿ ಹಾಗೂ ಸುತ್ತಲಿನ ಗದ್ದೆಗಳು, ಕೃಷಿ ಭೂಮಿ ಹಾಗೂ ಹಲವು ಮನಗಳು ನೀರಿನಿಂದಾವೃತ್ತಗೊಂಡಿವೆ.

ಕಾವೇರಿ ಮತ್ತು ಹಾರಂಗಿ ನದಿ ಸಂಗಮ ಸ್ಥಳ ಕೂಡಿಗೆಯಿಂದ ಮುಂದೆ ಹರಿಯುವ ಕಾವೇರಿ ನದಿಗೆ ಕಣಿವೆ ಹತ್ತಿರ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಪೂರ್ತಿ ಮುಳುಗಡೆಗೊಂಡಿದ್ದು, ಕಾವೇರಿ ನದಿ ದಡದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನಲ್ಲಿರುವ ಮೆಟ್ಟಿಲುಗಳು ಸಹ ಮುಳುಗಿವೆ.

ಅಣೆಕಟ್ಟೆಯಿಂದ ರಾತ್ರಿ ಹೆಚ್ಚು ನೀರು ನದಿಗೆ ಹರಿಸಿದ ಪರಿಣಾಮ ಕಾವೇರಿ ಮತ್ತು ಹಾರಂಗಿ ಸಂಗಮದ ನೀರು ಕೂಡಾ ಹೆಚ್ಚಳದ ಪರಿಣಾಮ ನದಿ ದಂಡೆಯಿಂದ ಅರ್ಧ ಕಿ.ಮೀ ದೂರದವರೆಗೂ ಹರಿಯುತ್ತಿರುವ ನೀರು ಹಳೆ ಕೂಡಿಗೆ ಗ್ರಾಮದ ಸೋಮಾಚಾರಿ ಎಂಬುವವರ ಮನೆಗೆ ನುಗ್ಗಿದೆ. ಅಲ್ಲದೆ, ಪಕ್ಕದಲ್ಲೇ ಕೋಳಿ ಫಾರಂನಲ್ಲಿದ್ದ 2000ಕ್ಕೂ ಹೆಚ್ಚು ಕೋಳಿಗಳು ಹಾಗೂ ಕೋಳಿ ಆಹಾರವೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿವೆ.

ಹಾರಂಗಿ-ಕೂಡಿಗೆ ಸಂಗಮದವರೆಗೆ ನೀರಿನ ಪ್ರಮಾಣದ ಹೆಚ್ಚಳದಿಂದ ಕೂಡಿಗೆ ಸರ್ಕಲ್‍ನ ಭೋಜರಾಜ್, ಅಣ್ಣಯ್ಯ, ರಾಮಕೃಷ್ಣ, ಕೆ.ಎಂ.ಚಂದ್ರುಮೂಡ್ಲಿಗೌಡ ಎಂಬುವವರ ಮನೆಗೂ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಅಲ್ಲದೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಹುದುಗೂರು ಭಾಗಗಳಲ್ಲಿನ ಶುಂಠಿ, ಕೆಸ, ಕೇನೆ, ಜೋಳ, ಭತ್ತದ ಜಮೀನುಗಳೂ ಸಹ ಜಲಾವೃತಗೊಂಡಿವೆ.

ಮಳೆಯ ಆರ್ಭಟಕ್ಕೆ ತತ್ತರಿಸಿರುವ ಜನರ ಜೀವನ ಅಸ್ಥವ್ಯಸ್ಥಗೊಂಡದೆ. ಬುಧವಾರ ಮಳೆಯ ಪ್ರಮಾಣ ತಗ್ಗಿದರೂ ಸಹ ನೀರಿನ ಪ್ರಮಾಣ ಹೆಚ್ಚಾಗಿದೆ. ಕುಶಾಲನಗರದ ಸಾಯಿ ಬಡಾವಣೆಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಅಂದಾಜು 17 ಕುಟುಂಬಗಳನ್ನು ಸ್ಥಳಾಂತರಿಸಿರುವ ಬಗ್ಗೆ ವರದಿಯಾಗಿದೆ.

ಪ್ರವಾಸಿಗರೇ ಬರಬೇಡಿ: ನಿರಂತರ ಮಳೆಯಿಂದ ಕೊಡಗಿನ ಪ್ರವಾಸೋದ್ಯಮಕ್ಕೂ ಧಕ್ಕೆಯಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ಪ್ರವಾಸಿತಾಣಗಳು ಅಪಾಯದಂಚಿನಲ್ಲಿದ್ದು, ಸದ್ಯಕ್ಕೆ ಕೊಡಗಿನ ಕಡೆಯ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು