ಚಾಮರಾರನಗರ: ಕೇರಳದಲ್ಲಿ ಮಹಾಮಳೆ ಮುಂದುವರೆದ ಕಾರಣ ಅದರ ಪರಿಣಾಮ ಗಡಿಭಾಗದ ಚಾಮರಾಜನಗರ ಜಿಲ್ಲೆಗೂ ತಟ್ಟಿದೆ. ಈಗಾಗಲೇ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಬಂಡೀಪುರ – ಮುತ್ತಂಗಿ ಅರಣ್ಯದ ನಡುವಿನ ನದಿ ತುಂಬಿ ಹರಿಯುತ್ತಿರುವ ಕಾರಣ ಸಂಚಾರಕ್ಕೆ ಅಡಚಣೆಯಾಗಿದೆ.
ಕೇರಳದ ವೈನಾಡು ಜಿಲ್ಲೆ ಸುಲ್ತಾನ್ ಬತ್ತೇರಿ ತಾಲೂಕಿನ ಪೊಂಗಲಿ ಗ್ರಾಮದ ರಾಮನ ದೇವಸ್ಥಾನದ ಬಳಿ ಜಲಾವೃತವಾಗಿದ್ದು ಇದರಿಂದ ವಾಹನಗಳ ಸಂಚಾರಕ್ಕೆ ತಡೆಯಾಗಿದೆ. ಇದೇ ವೇಳೆ ಕೇರಳದಿಂದ ಕರ್ನಾಟಕಕ್ಕೆ ಬರುತ್ತಿದ್ದ ಐರಾವತ ಬಸ್ ಮಳೆಯ ನೀರಿನಲ್ಲಿ ಸಿಕ್ಕಿಕೊಂಡ ಘಟನೆಯೂ ನಡೆದಿದೆ.
ಜನ ಮಳೆಯ ನೀರಿನಲ್ಲೇ ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲಿ ನೋಡಿದರಲ್ಲಿ ಬರೀ ನೀರೇ ಕಂಡು ಬರುತ್ತಿದ್ದು, ಸುಲ್ತಾನ್ ಬತ್ತೇರಿ ಸಮೀಪದ ಪೊಂಗಲಿಯ ಸಮೀಪದಲ್ಲಿರುವ ಮೂಲೆಹೊಳೆ ನದಿ ಉಕ್ಕಿ ಹರಿಯುತ್ತಿದೆ.
ಈ ನದಿ ಬಂಡೀಪುರ ಅಭಯಾರಣ್ಯದ ನಡುವೆ ಹಾದು ಹೋಗಿದ್ದು, ನದಿಯ ನೀರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಬಿನಿ ಹಾಗೂ ನುಗು ಜಲಾಶಯ ಮೂಲಕ ಕೊಳ್ಳೇಗಾಲ ತಾಲೂಕಿನ ಗಗನಚುಕ್ಕಿ, ಭರಚುಕ್ಕಿ ಮೂಲಕ ಹೊಗೇನಕಲ್ ಫಾಲ್ಸ್ ಸೇರಿ ತಮಿಳುನಾಡಿಗೆ ಹರಿಯುತ್ತದೆ. ಈ ನದಿಯಲ್ಲಿ ಪ್ರವಾಹ ಕಂಡು ಬಂದಿರುವುದರಿಂದ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗಿದೆ. ಈ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಕಾರಣದಿಂದಾಗಿ ಕರ್ನಾಟಕ ಕೇರಳ ನಡುವೆ ವಾಹನ ಸಂಚಾರ ಸ್ಥಗಿತಗೊಳಿಸಿದ್ದು ವಾಹನಗಳು ಸಂಚರಿಸಿದಂತೆ ಸೂಚನೆ ನೀಡಿದ್ದಾರೆ.