ಮಡಿಕೇರಿ: ಮಹಾಮಳೆ ಹಾಗೂ ಎಲ್ಲೆಡೆ ಗುಡ್ಡ ಕುಸಿತದಿಂದ ಕೊಡಗಿನಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದ್ದು, ಜನರ ರಕ್ಷಣೆಗೆ ಭೂಸೇನೆ ಹಾಗೂ ನೌಕಾಪಡೆ ಧಾವಿಸಿದೆ.
ಮಕ್ಕಂದೂರು, ಮುಕೋಡ್ಲು, ದೇವಸ್ತೂರು, ಕಾಲೂರು, ಮೇಘತಾಳು, ಹೆಬ್ಬೆಟ್ಟಗೇರಿ, ಮಾಂದಲಪಟ್ಟಿ ಗ್ರಾಮಗಳ ಜನರನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಾಲೇ ಗುಡ್ಡ ಜರಿದು ಈ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಹಲವು ಮನೆಗಳು ಕೊಚ್ಚಿ ಹೋಗಿವೆ. ಇಡೀ ಬೆಟ್ಟವೇ ಜರಿದಿರುವುದರಿಂದ ಮನೆಗಳು ಮಣ್ಣು ಪಾಲಾಗಿವೆ. ಹಲವು ಮಂದಿ ಬೆಟ್ಟ ಏರಿ ಕುಳಿತಿರುವ ಬಗ್ಗೆ ಮಾಹಿತಿ ಇದೆ.
ಕಾಲ್ನಡಿಗೆಯಲ್ಲೇ ಸಾಗಿದ ಯೋಧರು
ಕುಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಗ್ರಾಮಸ್ಥರನ್ನು ರಕ್ಷಿಸಲು ಆಗಮಿಸಿರುವ ಡೋಗ್ರಾ ರೆಜ್‍ಮೆಂಟ್‍ನ 60 ಸೈನಿಕರು, ಭಾರತೀಯ ಸೇನಾ ಪಡೆಯ ತಾಂತ್ರಿಕ ವಿಭಾಗದ 73 ಸೈನಿಕರು ಟ್ರಕ್ ಮೂಲಕ ತೆರಳಲು ಸಾಧ್ಯವಾಗದೆ ಕಾಲ್ನಡಿಗೆಯಲ್ಲೇ ಸುಮಾರು 10 ಕಿ.ಮೀ. ದೂರ ಸಾಗಿದ್ದಾರೆ. ಮಕ್ಕಂದೂರು, ಮುಕ್ಕೋಡ್ಲು ಭಾಗದಲ್ಲಿ ಪ್ರವಾಹದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗ್ರಾಮಗಳನ್ನು ಪ್ರವೇಶಿಸಲು ಯೋಧರಿಗೆ ಅಡ್ಡಿಯಾಗಿದೆ. ಹಗ್ಗಗಳನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಅಳವಡಿಸುವ ಕಾರ್ಯ ಅತ್ಯಂತ ಸಾಹಸದಾಯಕವಾಗಿದ್ದು, ಯೋಧರು ಕೂಡ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂಕಷ್ಟದಲ್ಲಿರುವ ಗ್ರಾಮಸ್ಥರನ್ನು ಹಗ್ಗದ ಸಹಕಾರದಿಂದಲೇ ತುಂಬಿ ಹರಿಯುತ್ತಿರುವ ಮಕ್ಕಂದೂರು ಹೊಳೆಯಿಂದ ದಾಟಿಸಬೇಕಾಗಿದೆ. ಕಾರ್ಯಾಚರಣೆ ಬಿರುಸುಗೊಂಡಿದ್ದು, ಮತ್ತಷ್ಟು ಯೋಧರ ತಂಡ ಆಗಮಿಸುವ ಸಾಧ್ಯತೆಗಳಿದೆ.
ಮುಕ್ಕೋಡ್ಲು ಊರಿನವರೇ ಆದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಮನೆಯಲ್ಲಿ 300 ಮಂದಿ, ಜಿ.ಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಮನೆಯಲ್ಲಿ, ಹಂಚೆಟ್ಟಿರ ಮನು ಮುದ್ದಪ್ಪ ಅವರ ಮನೆಯಲ್ಲಿ 250 ಮಂದಿ, ಸೂರ್ಲಬ್ಬಿಯ ಅಂಗಡಿ ಬಳಿ 100 ಮಂದಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರವಾಹದ ನೀರು ಮತ್ತು ಮಣ್ಣಿನ ರಾಶಿಯಿಂದಾಗಿ ಗ್ರಾಮ ಬಿಟ್ಟು ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ವೃದ್ಧರು, ಮಕ್ಕಳು, ಮಹಿಳೆಯರು ಮನೆ ಕಳೆದುಕೊಂಡು ಅಲ್ಲಿನ 2-3 ದಿನಗಳಿಂದ ಬೆಟ್ಟದಲ್ಲಿ ಆಶ್ರಯ ಪಡೆದಿದ್ದಾರೆ.
ಮೈಸೂರು, ಹಾಸನ ಸೇರಿದಂತೆ ಪಕ್ಕದ ಜಿಲ್ಲೆಗಳ ಹಿರಿಯ ಅಧಿಕಾರಿಗಳು, ವೈದ್ಯಕೀಯ ತಂಡ, ಪ್ರಕೃತಿ ವಿಕೋಪ ರಕ್ಷಣಾ ತಂಡ ಕೊಡಗಿಗೆ ಆಗಮಿಸಿದ್ದು, ಪ್ರವಾಹ, ಗುಡ್ಡಕುಸಿತದಿಂದ ಅತಂತ್ರರಾಗಿ ಕಾಡು, ಬೆಟ್ಟಗಳಲ್ಲಿ ಸಿಲುಕಿಕೊಂಡಿರುವ ಮಂದಿಯ ರಕ್ಷಣೆಯಲ್ಲಿ ತೊಡಿಗಿದ್ದಾರೆ.