ಮಡಿಕೇರಿ: ಪ್ರಕೃತಿ ವಿಕೋಪ ನಿಧಿಯಡಿ ಕೊಡಗು ಜಿಲ್ಲೆಗೆ 12 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ಆದ್ಯತೆ ಮೇರೆಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ 4500 ಕಿ.ಮೀ.ಗಳಷ್ಟು ಗ್ರಾಮೀಣ ರಸ್ತೆಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಮುಕ್ಕೋಡ್ಲು, ಮಕ್ಕಂದೂರು, ದೇವಸ್ತೂರು, ಗಾಳಿಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಪ್ರಾಣಹಾನಿ ಜತೆಗೆ ಭಾರೀ ಪ್ರಮಾಣದಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿದೆ. ಪ್ತಾಥಮಿಕ ಅಂದಾಜಿನ ಪ್ರಕಾರ ಕೊಡಗಿನಲ್ಲಿ 4500 ಕಿ.ಮೀ. ರಸ್ತೆ ದುರಸ್ತಿಗೊಳಗಾಗಿದ್ದು ಹಲವು ಗ್ರಾಮಗಳಿಗೆ ರಸ್ತೆಯನ್ನೇ ನಿರ್ಮಿಸಲು ಅಸಾಧ್ಯವಾದ ಪರಿಸ್ಥಿತಿಯಿದೆ ಎಂದು ಹೇಳಿದರು.
250 ಕಿ.ಮೀ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇವುಗಳನ್ನು ಹೊಸ ರಸ್ತೆಯಂತೆಯೇ ನಿರ್ಮಿಸಬೇಕಾಗಿದೆ ಎಂದು ಹೇಳಿದ ಕೃಷ್ಣಬೈರೇಗೌಡ, ಮುಕ್ಕೋಡ್ಲು, ದೇವಸ್ತೂರು ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವುದೇ ಅಸಾಧ್ಯ ಎಂದು ಹೇಳಿದರು.
ಕೃಷ್ಣ ಬೈರೇಗೌಡ, ತಮ್ಮ ಇಲಾಖೆಯಿಂದ ಕೊಡಗಿನ ರಸ್ತೆಗಳ ದುರಸ್ಥಿಗೆ ಎಲ್ಲಾ ರೀತಿಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಬದ್ದನಾಗಿದ್ದೇನೆ ಎಂದು ಭರವಸೆ ನೀಡಿದರು.