ಕಾರವಾರ: ರಾಷ್ಟ್ರೀಯ ಹೆದ್ದಾರಿ 66(17)ರ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 5 ತಾಲೂಕುಗಳಲ್ಲಿ ಭೂ ಸ್ವಾಧೀನದ ಪರಿಹಾರ ಪಡೆಯಲು ಭೂ ಮಾಲೀಕರು ಕೂಡಲೇ ದಾಖಲೆ ಪತ್ರಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಜಮೀನನ್ನು ಯಾವುದೇ ಮುಸ್ಸೂಚನೆ ನೀಡದೆ ಕಾನೂನು ಪ್ರಕಾರ ವಶಕ್ಕೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿ ನೀಡಿ ರೆಡ್ ನೋಟಿಸ್ ಜಾರಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಭೂಸ್ವಾಧೀನವಾದ ಜಮೀನು, ಕಟ್ಟಡ ಇತ್ಯಾದಿಗಳಿಗೆ ಪರಿಹಾರಧನ ಪಡೆಯುವಂತೆ ಭೂಮಾಲಿಕರಿಗೆ ಅಂತಿಮ(ರೆಡ್) ನೋಟಿಸ್ ನೀಡಲಾಗಿದೆ.
ಆದರೆ ಹಲವಾರು ಭೂಮಾಲೀಕರು ಇದುವರೆಗೂ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿಲ್ಲ. ಇನ್ನು ಕೆಲವು ಭೂಮಾಲೀಕರು ಭೂಸ್ವಾಧೀನ ಜಮೀನಿನ ಪರಿಹಾರ ಸ್ವೀಕರಿಸಿದ್ದು, ಜಮೀನನ್ನು ರಾ.ಹೆ. ಪ್ರಾಧಿಕಾರಕ್ಕೆ ಹಸ್ತಾಂತರಿಸಿಲ್ಲ. ಚತುಷ್ಪಥ ಯೋಜನೆ ಕಾಮಗಾರಿಯು ಸರಕಾರದ ಬಹಳ ಮಹತ್ವದ ಯೋಜನೆಯಾಗಿರುವುದರಿಂದ ಕಾಮಗಾರಿ ಚುರುಕುಗೊಳಿಸಿ ನಿಗದಿತ ಕಾಲಾವಧಿಯೊಳಗೆ ಮುಕ್ತಾಯಗೊಳಿಸಬೇಕಿರುವುದರಿಂದ ಸಂಬಂಧಪಟ್ಟ ಭೂ ಮಾಲೀಕರು ಅಗತ್ಯ ದಾಖಲೆಗಳನ್ನು ವಿಶೇಷ ಭೂಸ್ವಾಧೀನಾಧಿಕರಿಗಳಿಗೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಭೂಮಾಲೀಕರು ದಾಖಲೆಗಳನ್ನು ಹಾಜರುಪಡಿಸದೇ ಇದ್ದಲ್ಲಿ ಪುನಃ ಯಾವುದೇ ತಿಳುವಳಿಕೆಯನ್ನು ನೀಡದೇ ರಾಸ್ಟ್ರೀಯ ಹೆದ್ದಆರಿ ಕಾಯ್ದೆ 3ಇ(2)(ಬಿ)ರಂತೆ ಜಮೀನನ್ನು ವಶಕ್ಕೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.