ನಾಗಮಂಗಲ: ಅಕ್ರಮ ಕಲ್ಲುಗಣಿಗಾರಿಕೆ ವಿಚಾರವಾಗಿ ಎರಡು ಕೋಮುಗಳು ಪರಸ್ಪರ ಬಡಿದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಬೆಳ್ಳೂರು ಕ್ರಾಸ್‍ನಲ್ಲಿ ಶನಿವಾರ ನಡೆದಿದ್ದು, ದೊಡ್ಡೇಗೌಡನಹಳ್ಳಿ ಗ್ರಾಮಕ್ಕೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ನಾಗಮಂಗಲ ತಾಲ್ಳೂಕಿನ ದೊಡ್ಡೇಗೌಡನಹಳ್ಳಿ ಗ್ರಾಮದ ಸವರ್ಣಿಯರು ಹಾಗೂ ಭೋವಿ ಜನಾಂಗದವರು ಪಕ್ಕದ ಗ್ರಾಮ ಕನ್ನೇನಹಳ್ಳಿ ಬಳಿ ಅಕ್ರಮ ಗಣಿಗಾರಿಕೆ ನಡೆಸುವ ವಿಚಾರದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಗ್ರಾಮದ ಬೋವಿ ಜನಾಂಗದ ಪಾಪ ಬೋವಿ ಮತ್ತು ಆತನ ಬೆಂಬಲಿಗರು ಬೆಳ್ಳೂರು ಕ್ರಾಸ್ ಬಳಿ ನಿಂತಿದ್ದ ವೇಳೆ ಸವರ್ಣಿಯ ಸಮುದಾಯದ ಪುಟ್ಟಸ್ವಾಮಿ ಮತ್ತು ಸಂಗಡಿಗರು ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದಾರೆ ಹಾಗೂ ಅಕ್ರಮ ಗಣಿಗಾರಿಕೆ ವಿಚಾರವಾಗಿ ಧಮಕಿ ಹಾಕಿದರಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಘಟನೆಯಲ್ಲಿ 6 ಜನ ಬೋವಿ ಜನಾಂಗದವರು ಗಾಯಗೊಂಡು ಬೆಳ್ಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿಯಾಗಿ ಹಲವರು ಸವರ್ಣಿಯರೂ ಕೂಡ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಅಕ್ರಮ ಕಲ್ಲುಗಣಿಗಾರಿಕೆ ವಿಚಾರವಾಗಿ ತಿಂಗಳಿಂದಲೂ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಒಂದು ಗುಂಪು ಗಣಿ ಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಬೆಳ್ಳೂರು ಠಾಣೆ ಮುಂದೆ ದರಣಿ ನಡೆಸಿತ್ತು. ನಂತರದಲ್ಲಿ ತಹಸೀಲ್ದಾರ್ ನಂಜುಂಡಯ್ಯ ಎರಡು ಗುಂಪುಗಳ ಶಾಂತಿ ಸಭೆ ನಡೆಸಿದ್ದರು ಮತ್ತು ಅಕ್ರಮ ಗಣಿಗಾರಿಕೆಯ ಕನ್ನೇನಹಳ್ಳಿ ಪ್ರದೇಶವನ್ನು ನಿಷೇಧಿತ ಪ್ರದೇಶವೇಂದು ಘೋಷಿಸಿ 145 ಸೆಕ್ಷನ್ ಜಾರಿಗೊಳಿಸಿದ್ದರು.
ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್‍ಪಿ ಧರ್ಮೇಂದ್ರ.ಸಿಪಿಐ ನಂಜಪ್ಪ, ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಯಪ್ರಕಾಶ್ ಬಾಬು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಹಾಗೂ ಮುನ್ನೆಚ್ಚರಿಕೆಯಾಗಿ ದೊಡ್ಡೇಗೌಡನಹಳ್ಳಿ ಗ್ರಾಮದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ.