ಮಡಿಕೇರಿ: ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ಉಂಟಾಗಲಿದೆ. ಆದ್ದರಿಂದ ‘ಪರಿಸರ ಸ್ನೇಹಿ ಹಸಿರು ದೀಪಾವಳಿ’ಆಚರಣೆಯಾಗಲಿ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ‘ಪರಿಸರಸ್ನೇಹಿ ಹಸಿರು ದೀಪಾವಳಿ ಆಚರಣೆ’ ಕುರಿತಂತೆ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದ ಅವರು ಪರಿಸರ ಮಾಲಿನ್ಯ ತಡೆಗಟ್ಟುವುದರಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಾತನಾಡಿ ಭಾರೀ ಸ್ಫೋಟದ ಪಟಾಕಿ ಸಿಡಿದರೆ ಪರಿಸರಕ್ಕೆ ಹಾನಿಯಾಗುತ್ತದೆ, ಆದ್ದರಿಂದ ನಿಯಂತ್ರಣ ಅಗತ್ಯ ಮತ್ತು ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಜಾಗೃತಿ
ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ ಮಡಿಕೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕಾರ್ಯಕ್ರಮವನ್ನು ಸಂಘಟಿಸಿ ಆಚರಿಸಿಕೊಂಡು ಬರಲಾಗುತ್ತಿದೆ.
ನ.5 ರಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬೆಳಗ್ಗಿನ ಸಾಮೂಹಿಕ ಪ್ರಾರ್ಥನಾ ವೇಳೆಯಲ್ಲಿ 10 ನಿಮಿಷಗಳ ಕಾಲ ಪಟಾಕಿಮುಕ್ತ ದೀಪಾವಳಿ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನವನ್ನು ಮೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ಸಂಘಟಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.
ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಮಣ್ಣಿನ ಹಣತೆ ಬೆಳಗಿಸುವ ಮೂಲಕ ಹಣತೆ ಹಚ್ಚೋಣ-ಪಟಾಕಿ ತ್ಯಜಿಸೋಣ: ಹಣತೆ ಹಚ್ಚೋಣ ಬನ್ನಿ, ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಬನ್ನಿ ಎಂಬ ಧ್ಯೇಯದ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿದೆ.
ಇದೇ ವೇಳೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಮತ್ತು ಮಾಲಿನ್ಯದ ದುಷ್ಪರಿಣಾಮಗಳು ಹಾಗೂ ಅಂಧತ್ವದ ಅಪಾಯ ಸೃಷ್ಠಿಸುವ ಪಟಾಕಿಯನ್ನು ಬಿಟ್ಟು ದೀಪಾವಳಿ ಆಚರಿಸುವ ಕುರಿತಂತೆ ಪರಿಸರ ವಿಜ್ಞಾನ ಮೂಡಿಸಲು ಕೋರಲಾಗಿದೆ.