News Kannada
Monday, October 03 2022

ಕರ್ನಾಟಕ

ಮಂಡ್ಯದಲ್ಲಿ ಭತ್ತದ ಕೊಯ್ಲು ಮಾಡಿ ಸುಗ್ಗಿ ತಂದ ಸಿಎಂ - 1 min read

Photo Credit :

ಮಂಡ್ಯದಲ್ಲಿ ಭತ್ತದ ಕೊಯ್ಲು ಮಾಡಿ ಸುಗ್ಗಿ ತಂದ  ಸಿಎಂ

 ಮಂಡ್ಯ: ಆಗಸ್ಟ್ 11ರಂದು ನಾಟಿ ಮಾಡಿ ಹೋಗಿದ್ದ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಕೊಯ್ಲಿಗೆ ಚಾಲನೆ ನೀಡಿದ್ದಾರೆ. ಆದರೆ ಕಾರ್ಯಕ್ರಮ ನಿಗದಿಯಾಗಿದ್ದ ಸಮಯಕ್ಕಿಂತ ಸುಮಾರು 3ಗಂಟೆ ತಡವಾಗಿ ಸಿಎಂ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಕಾದು ಸುಸ್ತಾಗಿದ್ದ ಬಹುತೇಕ ಜನ ತಮ್ಮ ಮನೆಯ ಹಾದಿ ಹಿಡಿದಿದ್ದರು. 

ಸಿಎಂ ಕುಮಾರಸ್ವಾಮಿ ಅವರೇ ಭತ್ತದ ಕೊಯ್ಲು ಮಾಡಿ,  ಭತ್ತದ ಒಕ್ಕಣೆ ಮಾಡಿ ಬಳಿಕ ಭತ್ತದ ರಾಶಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತಾದರೂ ತಡವಾಗಿ ಬಂದ ಕಾರಣ ಅದ್ಯಾವುದೂ ನಡೆಯಲಿಲ್ಲ ಬದಲಿಗೆ ಸಂಜೆ 6 ಗಂಟೆಗೆ ಗದ್ದೆಗಿಳಿದು ಭತ್ತ ಕೊಯ್ಲಿಗೆ ಚಾಲನೆ ನೀಡಿದರಷ್ಟೆ ಅಲ್ಲದೆ ಮೊದಲೇ ಕೊಯ್ಲು ಮಾಡಿ ರಾಶಿ ಹಾಕಿದ್ದ ಭತ್ತಕ್ಕೆ 6.04 ನಿಮಿಷಕ್ಕೆ ಪೂಜೆ ಸಲ್ಲಿಸಿದರು. 

ಸೀತಾಪುರದ ಯೋಗೇಂದ್ರ ಅವರಿಗೆ ಸೇರಿದ್ದ ಒಂದೂವರೆ ಎಕರೆ ಹಾಗೂ ಡಿ.ದೇವರಾಜು ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಭತ್ತ ಕೊಯ್ಲು ಮಾಡಲಾಯಿತು. ಕೊಯ್ಲಿಗಾಗಿ ಸಿಎಂ ಕುಮಾರಸ್ವಾಮಿ ಮತ್ತು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ವರಿಗೆ ಹಿತ್ತಾಳೆಯ ಕುಡುಗೋಲನ್ನು ವಿಶೇಷವಾಗಿ ಸಿದ್ಧಪಡಿಸಲಾಗಿತ್ತು. 60 ಗಂಡಾಳುಗಳು ಹಾಗೂ 25 ಹೆಣ್ಣಾಳುಗಳು ಮುಖ್ಯಮಂತ್ರಿಗೆ ಸಾಥ್ ನೀಡಿದರು. ಸಿಎಂ ಅವರಿಂದ ಕೊಯ್ಲು ಪ್ರಕ್ರಿಯೆ ನಡೆಸಿ ರಾಶಿ ಪೂಜೆ ಮಾಡಲು ಹೆಚ್ಚು ಸಮಯವಾಗಲಿದೆ ಎಂಬ ಕಾರಣಕ್ಕೆ ಬೆಳಗ್ಗೆಯೇ ಯಂತ್ರದ ಮೂಲಕ ಮೂರು ಎಕರೆ ಪ್ರದೇಶದ ಭತ್ತವನ್ನು ಕಟಾವು ಮಾಡಿ ಒಕ್ಕಣೆ ಮಾಡಲಾಗಿತ್ತು. ಅಲ್ಲದೆ ಭತ್ತದ ರಾಶಿಯನ್ನು ಸೇವಂತಿಗೆ ಹೂವು, ಬಾಳೆ ದಿಂಡು, ಕಬ್ಬಿನ ತೊಂಡೆಗಳಿಂದ ಸಿಂಗಾರಿಸಲಾಗಿತ್ತು. ಭತ್ತದ ರಾಶಿಯ ಪಶ್ಚಿಮ ಭಾಗದ ಕೊಳಗ ಮತ್ತು ಬಳ್ಳದಲ್ಲಿ ಭತ್ತವನ್ನು ತುಂಬಿ ಇಡಲಾಗಿತ್ತು. 

ಭತ್ತ ಕೊಯ್ಲು ಮಾಡಲು ಸೀತಾಪುರ ಗ್ರಾಮಕ್ಕೆ ಆಗಮಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗಾಗಿಯೇ ಹೊಸ ಕುಡುಗೋಲನ್ನು ರೈತರು ಸಿದ್ಧಪಡಿಸಿದ್ದರು. ಹಿಡಿಕೆಗೆ ಹಿತ್ತಾಳೆ ಬಳೆ ಹೊಂದಿರುವ ವಿಶೇಷ ಮಾದರಿಯ ಕುಡುಗೋಲನ್ನು ಹುಬ್ಬಳ್ಳಿ ಮೂಲದ ಗೆಜ್ಜಗಾರರಿಂದ ತಯಾರಿಸಲಾಗಿತ್ತಲ್ಲದೆ 12 ಕುಡುಗೋಲನ್ನು  ಸಚಿವರು ಹಾಗೂ ಜನಪ್ರತಿನಿಧಿಗಳಿಗಾಗಿ ಸೋಮಶೇಖರ್ ಎಂಬ ರೈತ ಸಿದ್ಧಪಡಿಸಿ ತರಿಸಿಟ್ಟಿದ್ದರು. ಭತ್ತ ಕೊಯ್ಲು ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳುವ 40 ಪುರುಷ ಹಾಗೂ 10 ಮಹಿಳಾ ಕೃಷಿ ಕಾರ್ಮಿಕರಿಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. 

ಆಗಸ್ಟ್ 11ರಂದು ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಟಿ ಮಾಡಿದ್ದ ಐದು ಎಕರೆ ಪ್ರದೇಶದ ಪೈಕಿ ಮೂರು ಎಕರೆ ಪ್ರದೇಶದಲ್ಲಿ ಭತ್ತದ ಕಟಾವು ಮುಗಿಸಿದ್ದು ನೂರು ಕ್ವಿಂಟಾಲ್ ಭತ್ತ ಸಂಗ್ರಹವಾಗಿದೆ. ಕಟಾವು ಮಾಡಿದ ಭತ್ತದ ಫಸಲನ್ನು ರಾಶಿ ಪೂಜೆಗೆ ಗದ್ದೆಯ ಪಕ್ಕ ನಿರ್ಮಿಸಿರುವ ಕಣದಲ್ಲಿ ರಾಶಿ ಹಾಕಲಾಗಿದೆ. ಉಳಿದ ಎರಡು ಎಕರೆ ಪ್ರದೇಶದ ಭತ್ತದ ಕೊಯ್ಲಿಗೆ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. 

ಇದಕ್ಕೂ ಮುನ್ನ ಸೀತಾಪುರ ಗ್ರಾಮ ಆಗಮಿಸಿದ್ದ ಸಿಎಂನ್ನು ಸೋಬಾನೆ ಪದ ಹಾಡುಗಾರರು, ಜಾನಪದ ಕಲಾವಿದರು ನೀಲಿ ಬಣ್ಣದ ಉಡುಗೆ ತೊಟ್ಟ ಒಬ್ಬ ಪುರುಷ ಹಾಗೂ ಮೂವರು ಮಹಿಳೆಯರ ತಂಡ,. ಬಿಳಿ ಪಂಚೆ, ಅಂಗಿ, ಕೆಂಪು ಟವೆಲ್ ಧರಿಸಿದ ಜಾನಪದ ಕಲಾವಿದರ ತಂಡ ಸ್ವಾಗತಿಸಿ  ಕಾಲುವೆ ಏರಿಯ ಮೇಲಿನಿಂದ ಎತ್ತಿನಗಾಡಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು

See also  ನೀರುಗಂಟಿಗೆ ಚಾಕುವಿನಿಂದ ಇರಿದು ಪರಾರಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭತ್ತ ನಾಟಿ ಮಾಡಿದ ಆ.11 ಅಮಾವಾಸ್ಯೆ ದಿನ. ಈಗ ಭತ್ತ ಕೊಯ್ಲು ಮಾಡಿದ ಡಿ.7 ಕೂಡ ಅಮಾವಾಸ್ಯೆಯೇ ಎನ್ನುವುದು ವಿಶೇಷ. ಆ.11ರ ಅಮಾವಾಸ್ಯೆಯಂದು ಸಿಎಂ ಆದಿ ಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಪಾಂಡವಪುರದ ಸೀತಾಪುರ ಗ್ರಾಮಕ್ಕೆ ಆಗಮಿಸಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು ಹಾಗೆಯೇ  ಡಿ.7ರ ಅಮಾವಾಸ್ಯೆ ದಿನ ಶೃಂಗೇರಿಯ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಭತ್ತ ಕೊಯ್ಲಿಗೆ ಚಾಲನೆ ನೀಡಿದ್ದಾರೆ. ಅಮಾವಾಸ್ಯೆ ದಿನದಂದೇ ಸಿಎಂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರ ಹಿಂದೆ ಅವರದ್ದೇ ಆದ ನಂಬಿಕೆಯಿರುವುದನ್ನು ಕಾಣಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು