News Kannada
Friday, October 07 2022

ಕರ್ನಾಟಕ

ಹಾಡ್ಯ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಕಟ್ಟಡದ್ದೇ ಭಯ..! - 1 min read

Photo Credit :

ಹಾಡ್ಯ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಕಟ್ಟಡದ್ದೇ ಭಯ..!

ಮೈಸೂರು: ಇವತ್ತು ಸರ್ಕಾರಿ ಶಾಲೆಗಳ ಕುರಿತಂತೆ ಹಲವರು ಭಾಷಣ ಬಿಗಿದರೂ ಅವುಗಳ ಅಭಿವೃದ್ಧಿಯತ್ತ ಗಂಭೀರವಾಗಿ ಸರ್ಕಾರ ಕಾಳಜಿ ವಹಿಸದ ಕಾರಣದಿಂದಾಗಿ ಹತ್ತು ಹಲವು ಸಮಸ್ಯೆಗಳಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಬಳಲುತ್ತಿವೆ. ಇಂತಹ ದುಸ್ಥಿತಿಯಲ್ಲಿ ಸಾಗುತ್ತಿರುವ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಪೈಕಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ  ಹಾಡ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ. 

ಕುಸಿದು ಬೀಳುವಂತಹ ಶಿಥಿಲಾವಸ್ಥೆಯ ಕಟ್ಟಡದಲ್ಲಿಯೇ ಭಯದಿಂದ ಮಕ್ಕಳು ವಿದ್ಯೆ ಕಲಿಯುವಂತಾಗಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಬೇರೆ ಶಾಲೆಗಳತ್ತ ಮುಖ ಮಾಡಿದ್ದರೆ ಕೆಲವೇ ಕೆಲವು ಬಡ ಮಕ್ಕಳು ಮಾತ್ರ ಇಲ್ಲಿ ಓದುತ್ತಿದ್ದಾರೆ. ಇಷ್ಟಕ್ಕೂ ಶಾಲೆಗೆ ಬರುವ ಮಕ್ಕಳು ನೆಮ್ಮದಿಯಾಗಿ ಪಾಠ ಕಲಿಯಲು ಇಲ್ಲಿ ಮೂಲಭೂತ ಸೌಲಭ್ಯವಿದೆಯಾ ಎಂಬುದನ್ನು ನೋಡುವುದಾದರೆ ಅದು ಇಲ್ಲ ಎಂಬುದು ಈ ಶಾಲೆಯ ಕಟ್ಟಡವನ್ನು ನೋಡಿದ ತಕ್ಷಣವೇ ಹೇಳಬಹುದಾಗಿದೆ.  ಬೇರೆಡೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಇಲ್ಲಿ  1 ನೇ ತರಗತಿಯಿಂದ 5 ನೇ ತರಗತಿವರೆಗೆ ಸುಮಾರು 100 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಮಕ್ಕಳಿಗೆ ಶಾಲೆಯಲ್ಲಿರಬೇಕಾದ ಯಾವ ಸೌಲಭ್ಯಗಳು ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. 

ಇವತ್ತು ಈ ಶಾಲೆ ತಲುಪಿರುವ ದುಸ್ಥಿತಿಯನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಕಾರಣ ಹಳೆಯಕಾಲದ ಶಾಲಾ ಕಟ್ಟಡ ದುಸ್ಥಿತಿಯಲ್ಲಿದೆ. ಜತೆಗೆ ಮಳೆ ಬಂದರೆ ಎಲ್ಲಿ ನೆಲಕ್ಕುರುಳಿ ಬಿಡುತ್ತದೆಯೇನೋ ಎಂಬ ಭಯವೂ ಕಾಡುತ್ತದೆ. ಆದರೆ ಮಕ್ಕಳು ಭಯದಲ್ಲಿ ಕಲಿಯುತ್ತಿದ್ದರೆ, ಶಿಕ್ಷಕರನ್ನು ಕೂಡ ಭಯ ಕಾಡದಿಲ್ಲ. ಏಕೆಂದರೆ ಮೇಲ್ಛಾವಣಿಗಳು ಕಿತ್ತು ಬೀಳುತ್ತಿವೆ. ಜತೆಗೆ ಗೋಡೆಯಲ್ಲಿ ಬಿರುಕು ಕೂಡ ಕಾಣಿಸಿಕೊಂಡಿದೆ. ಹೀಗಾಗಿಯೇ ಶಿಕ್ಷಕರು ಕೊಠಡಿಯಲ್ಲಿ ಕುಳ್ಳರಿಸಿ ಮಕ್ಕಳಿಗೆ ಪಾಠ ಮಾಡುವ ಬದಲು ಹೊರಗೆ ಕೂರಿಸಿ ಪಾಠ ಮಾಡುವಂತಾಗಿದೆ. 

ಮಕ್ಕಳಿಗೆ ಕುಳಿತುಕೊಂಡು ನೆಮ್ಮದಿಯಾಗಿ ಪಾಠ ಕೇಳಲು ಬೆಂಚು ಡೆಸ್ಕ್ ನಂತಹ ಯಾವುದೇ ಪೀಠೋಪಕರಣಗಳಿಲ್ಲ. ಮಕ್ಕಳು ನೆಲದಲ್ಲಿಯೇ ಕುಳಿತು ಪಾಠ ಕೇಳಬೇಕಾಗಿದೆ. ಶಾಲೆಯಲ್ಲಿನ ದುಸ್ಥಿತಿ ನೋಡಿ ಇಂತಹ ಸೌಲಭ್ಯ ವಂಚಿತ ಮತ್ತು ಶಿಥಿಲಾವಸ್ಥೆಯ ಕಟ್ಟಡವಿರುವ ಶಾಲೆಗೆ ಕಳುಹಿಸಿ ಏನಾದರು ತೊಂದರೆಯಾದರೆ ಮಕ್ಕಳ ಗತಿಯೇನು ಎಂದು ಹೆದರಿದ ಬಹಳಷ್ಟು ಪೋಷಕರು ಇಲ್ಲಿಗೆ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಿಲ್ಲ. 

ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಮತ್ತು ಅಭಿವೃದ್ಧಿ ಪಡಿಸುವ ಕುರಿತಂತೆ ಸರ್ಕಾರ ಘಂಟಾನುಘಂಟವಾಗಿ ಹೇಳುತ್ತಾ ಬರುತ್ತಿದ್ದರೂ ಅವುಗಳೆಲ್ಲ ಭಾಷಣಕ್ಕಷ್ಟೆ ಸೀಮಿತವಾಗಿದ್ದು, ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಿಸಿದ ಬಗೆಗಿನ ನಿದರ್ಶನಗಳು ಕಡಿಮೆಯೇ ಎನ್ನಬೇಕು. ಶಾಲಾ ಕಟ್ಟಡಗಳು ಶಿಥಿಲಗೊಂಡು ಅವು ನೆಲಕ್ಕುರುಳುವ ತನಕ ಯಾವ ಜನಪ್ರತಿನಿಧಿಯೂ ಸೊಲ್ಲೆತ್ತುವುದಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದಾಗ ಮಾತ್ರ ಎಚ್ಚರಗೊಳ್ಳುತ್ತಾರೆ. ಇನ್ನಾದರೂ ಸಂಬಂಧಿಸಿದವರು ಕೇವಲ ಹಾಡ್ಯ ಗ್ರಾಮದ ಸರ್ಕಾರಿ ಶಾಲೆ ಮಾತ್ರವಲ್ಲ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳತ್ತ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

See also  ಅಸಲಿ ಚಿನ್ನ ತೋರಿಸಿ ನಕಲಿ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು