ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಮನೆ ನಿರ್ಮಾಣ ಸೇರಿದಂತೆ ಪರಿಹಾರ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ, ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಒತ್ತಾಯಿಸಿದೆ.
ಮಳೆಹಾನಿ ಸಂತ್ರಸ್ತರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಸಮಿತಿಯು ಸಂತ್ರಸ್ತರೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿತು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಸಂತ್ರಸ್ತರು ತ್ವರಿತಗತಿಯಲ್ಲಿ ಪರಿಹಾರ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ, ಸಮಿತಿಯ ಅಧ್ಯಕ್ಷರಾದ ಎಂ.ಬಿ.ದೇವಯ್ಯ, ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅತಿವೃಷ್ಟಿ ಹಾನಿ ಸಂಭವಿಸಿ ಐದು ತಿಂಗಳುಗಳೇ ಕಳೆದಿವೆ. ಆದರೆ ಇಲ್ಲಿಯವರೆಗೆ ಮನೆ ನಿರ್ಮಾಣ ಕಾರ್ಯ ಪ್ರಗತಿ ಕಂಡಿಲ್ಲ. ಗದ್ದೆ ಮತ್ತು ತೋಟಗಳಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ನಡೆದಿಲ್ಲ. ಸರ್ಕಾರ ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧಕ್ಕೆ ಮುತ್ತಿಗೆ
ಹೋರಾಟವನ್ನು ತೀವ್ರಗೊಳಿಸಿದಾಗ ಮಾತ್ರ ಸರ್ಕಾರ ಎಚ್ಚೆತುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಅವರು ರೈತಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಳೆಹಾನಿಯಿಂದ ಎಲ್ಲವನ್ನು ಕಳೆದುಕೊಂಡು ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿರುವ ಸಂತ್ರಸ್ತರ ಬಗ್ಗೆ ಯಾರೂ ಚಿಂತೆ ಮಾಡುತ್ತಿಲ್ಲವೆಂದು ದೇವಯ್ಯ ಬೇಸರ ವ್ಯಕ್ತಪಡಿಸಿದರು.
ರಾಜೀನಾಮೆಗೆ ಆಗ್ರಹ
ಸಮಿತಿಯ ಪ್ರಮುಖರಾದ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಕರೆ ನೀಡಿದರು. ಮುಂದೆ ಯಾವುದೇ ಚುನಾವಣೆಗಳು ಎದುರಾದರೂ ಅವುಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕು ಎಂದರು.