News Kannada
Friday, December 02 2022

ಕರ್ನಾಟಕ

ಕಿದೂರು ಗ್ರಾಮದಲ್ಲಿ ನಿರ್ಮಾಣವಾಗಲಿದೆ ಅತಿದೊಡ್ಡ ಪಕ್ಷಿಧಾಮ

Photo Credit :

ಕಿದೂರು ಗ್ರಾಮದಲ್ಲಿ ನಿರ್ಮಾಣವಾಗಲಿದೆ ಅತಿದೊಡ್ಡ ಪಕ್ಷಿಧಾಮ

ಕಾಸರಗೋಡು: ಹಸುರಿನ ಬನಸಿರಿಗೆ ಕೊಡಲಿಯೇಟು ಹಾಕಿ ಕಾಂಕ್ರೀಟು ಕಾಡು ನಿರ್ಮಿಸುವ ಮಾನವನ  ಸ್ವಾರ್ಥದ  ನಡುವೆಯೂ ಬಾನಾಡಿಗಳ ಸಂರಕ್ಷಣೆಗಾಗಿ ಕಿದೂರಿನಲ್ಲಿ ಧಾಮವೊಂದು ನಿರ್ಮಾಣಗೊಳ್ಳಲಿರುವುದು ಪ್ರಕೃತಿ ಪ್ರೇಮಿಗಳ ಗಮನ ಸೆಳೆಯುತ್ತಿದೆ. 

ರಾಜ್ಯ ಸರಕಾರದ ಬೆಂಬಲದೊಂದಿಗೆ, ವಿವಿಧ ಇಲಾಖೆಗಳ ಸಹಕಾರದೊಂದಿಗೆ, ಕುಂಬಳೆ ಗ್ರಾಮಪಂಚಾಯತ್ ಹೀಗೊಂದು ಅಪರೂಪದ ದೌತ್ಯಕ್ಕೆ ಹೊರಟಿದೆ. ಹಕ್ಕಿಗಳ ನಿರೀಕ್ಷಣೆಯೊಂದಿಗೆ, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೃಹತ್ ದೇಣಿಗೆಯಾಗಬಲ್ಲ ಪಕ್ಷಿಧಾಮದ ನಿರ್ಮಾಣ ಹೊಸನಿರೀಕ್ಷೆಗೆ ಕಾರಣವಾಗಿದೆ.

ಪಕ್ಷಿಜಾತಿಯ ಸ್ವಾಂತಂತ್ರ್ಯಕ್ಕೆ ಧಕ್ಕೆಯಾಗದೆ, ಅವುಗಳ ಜೀವನ ಶೈಲಿಗೆ, ವಿಹಾರಕ್ಕೆ ತೊಂದರೆಯಾಗದೆ, ಉಳಿದವರು ಅವುಗಳ ನಿರೀಕ್ಷಣೆ ನಡೆಸುವುದಕ್ಕೆ ಪೂರಕವಾದ ಪಕ್ಷಿಧಾಮದ ತಯಾರಿ ಇಲ್ಲಿ ನಡೆದಿದೆ. ಲ್ಯಾಟರೈಟ್ ಮಣ್ಣನ್ನು ಹೊಂದಿರುವ ಕಿದೂರು ಗ್ರಾಮ ಮೂಲತಃ ಕೃಷಿ ಪ್ರಧಾನ ಕೇಂದ್ರವಾಗಿದೆ. ಸುತ್ತಲೂ ಹಸುರು ಗದ್ದೆಗಳು, ತೋಟಗಳು, ಸಮೃದ್ಧವಾಗಿ ಹರಿಯುವ ಶಿರಿಯ ಹೊಳೆ, ಕಿರು ವನಾಂತರ ಪ್ರದೇಶಗಳು ಇತ್ಯಾದಿ ಪಶು-ಪಕ್ಷಿ ವಿಹಾರಕ್ಕೆ ಮೂಲಭೂತವಾಗಿಯೇ ಪೂರಕವಾಗಿವೆ. 

ಈಗಾಗಲೇ ಇಲ್ಲಿ ಆಸರೆ ಪಡೆದು ವಿಹರಿಸುತ್ತಿರುವ 174ಕ್ಕೂ ಮಿಕ್ಕು ಪಕ್ಷಿ ಜಾತಿಗಳನ್ನು ಪರಿಣತರು ಗುರುತಿಸಿದ್ದಾರೆ. ಇವುಗಳಲ್ಲಿ ಜುಟ್ಟಿರುವ ಬುಲ್ ಬುಲ್, ಬೇರೆ ಬೇರೆ ಜಾತಿಯ ಕೊಕ್ಕರೆ, ಕಡಲಕಾಗೆ, ಕಾಡುಕೋಳಿ ಇತ್ಯಾದಿ ವಂಶನಾಶದ ಭೀತಿಯಲ್ಲಿರುವವೂ ಸೇರಿವೆ. ಭಾರತದಲ್ಲೇ ಅಪರೂಪವಾದ ಹಳದಿ ಪಟ್ಟೆಗಳಿರುವ ಪಾರಿವಾಳ ಇಲ್ಲಿನ ಪ್ರಧಾನ ಆಕರ್ಷಣೆಯಾಗಿದೆ.

ಪಕ್ಷಿ ವೀಕ್ಷಕರಿಗಾಗಿ ಇಲ್ಲಿ ವರ್ಷಕ್ಕೆ 8 ಶಿಬಿರಗಳು ನಡೆಯುತ್ತವೆ. ಕುಂಬಳೆ ಗ್ರಾಮಪಂಚಾಯತ್ ಸಹಕಾರದೊಂದಿಗೆ ಪರಿಣಿತ ತಂಡಗಳು ಇಲ್ಲಿ ಶಿಬಿರ ನಡೆಸುತ್ತವೆ. ಕಳೆದ ವರ್ಷ ನವೆಂಬರ್ ನಲ್ಲಿ ಸೋಷ್ಯಲ್ ಫೋರೆಸ್ಟರಿ, ಕಾಸರಗೋಡು ಬರ್ಡ್ ಕೂಟ್ಮಾಯ್ಮ ಸಂಘಟನೆಗಳು ಇಲ್ಲಿ ಪಕ್ಷಿ ವೀಕ್ಷಕರಿಗಾಗಿ ಶಿಬಿರ ನಡೆಸಿದ್ದವು. ಬೇರೆ ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳೂ, ಪಕ್ಷಿ ತಜ್ಞರೂ ಇಲ್ಲಿಗೆ ಆಗಮಿಸಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಇಲ್ಲಿ ನಡೆಸಲಾಗಿದ್ದ ಚಿಟ್ಟೆಗಳ ವೀಕ್ಷಣೆ ಶಿಬಿರವೂ ಮುಕ್ತ ಪ್ರಶಸಂಸೆಗೆ ಕಾರಣವಾಗಿತ್ತು. ಜರ್ಮನಿಯಿಂದ ಆಗಮಿಸಿದ ಪರಿಣತರ ತಂಡವೊಂದು ಈ ವೇಳೆ ಇಲ್ಲಿ ಭಾಗವಹಿಸಿತ್ತು. 

ಪಕ್ಷಿ ವೀಕ್ಷಣೆಗೆ ಆಗಮಿಸುವ ವೀಕ್ಷಕ ಪರಿಣತರ ತಂಗುವಿಕೆಗೆ ಇಲ್ಲಿ ವಿಶಾಲ ಡೋರ್ಮಿಟರಿ ನಿರ್ಮಿಸಲು ಯೋಜನೆಯಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಈ ಬಗ್ಗೆ ಯೋಜನೆ ಸಿದ್ಧವಾಗುತ್ತಿದೆ ಎಂದು ಕುಂಬಳೆ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ತಿಳಿಸಿದರು.

 ಕಂದಾಯ ಇಲಾಖೆ ವ್ಯಾಪ್ತಿಯ ಮಿಗತೆ ಭೂಮಿಯಾದ ಹತ್ತು ಎಕ್ರೆ ಜಾಗದಲ್ಲಿ ಮೂರು ಅಂತಸ್ತಿನ ಡೋರ್ಮಿಟರಿ ನಿರ್ಮಾಣಗೊಳ್ಳಲಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಡಿ.ಟಿ.ಪಿ.ಸಿ.) ಯೋಜನೆಯ ರೂಪುರೇಷೆ ಸಿದ್ಧಪಡಿಸುತ್ತಿದೆ. 150

 ಮಂದಿ ವಾಸಿಸುವ ಸೌಲಭ್ಯವಿರುವ ಕಟ್ಟಡದಲ್ಲಿ ಪ್ರಕೃತಿಗೆ ಪೂರಕವಾದ ಸುಸಜ್ಜಿತ ಕೊಠಡಿಗಳು ಇರಲಿದೆ. 

 ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮುಕ್ತ ಸಭಾಂಗಣದ ನಿರ್ಮಾಣವೂ ನಡೆಯಲಿದೆ ಎಂದು ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್  ತಿಳಿಸಿದ್ದಾರೆ.

ಈ ಕಟ್ಟಡದ ಸೌಂದರ್ಯ ವರ್ಧನೆಗೆ ಕೃಷಿ ಇಲಾಖೆಯೊಂದಿಗೆ ಕೈಜೋಡಿಸಿ ಬಿದುರು ಗ್ರಾಮ ಯೋಜನೆ ಅನ್ವಯದ ಬಿದಿರಿನ ಬಳಕೆ ಸಹಿತ ಪ್ರಕೃತಿ ಸ್ನೇಹಿ ಪ್ರಕ್ರಿಯೆ ನಡೆಸಲಾಗುವುದು ಎಂದವರು ಹೇಳಿದರು.  

See also  ನಗರಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು

 ಸರೋವರ ಕ್ಷೇತ್ರ ಅನಂತಪರ ಶ್ರೀ ಅನಂತಪದ್ಮನಾಭ ದೇವಾಲಯ ಸಹಿತ ಅನೇಕ ಪ್ರವಾಸೋದ್ಯಮ ಕೇಂದ್ರಗಳಿರುವ ಕುಂಬಳೆ ಗ್ರಾಮಪಂಚಾಯತ್ ನಲ್ಲಿ ಈ ಹಕ್ಕಿಧಾಮ ನಿರ್ಮಾಣಗೊಂಡಲ್ಲಿ  ಪ್ರವಾಸೋದ್ಯಮ ವಲಯಕ್ಕೆ ಹೆಚ್ಚುವರಿ ಆಕರ್ಷಣೆ ಒದಗಲಿದೆ ಎಂದು ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ  ಅಭಿಪ್ರಾಯ ಪಟ್ಟಿದ್ದಾರೆ.

ಸಮಾಜಜಾಗೃತಿ ಇಲಾಖೆಯ “ಬಡ್ಡಿಂಗ್ ಬರ್ಡ್ಸ್” ಯೋಜನೆ ಪ್ರಕಾರ ಪಕ್ಷಿ ವೀಕ್ಷಣೆ ತರಬೇತಿ ಮೂಲಕ ಪಕ್ಷಿ ವೀಕ್ಷಕರ ಒಕ್ಕೂಟ ಜಿಲ್ಲೆಯಲ್ಲಿ ರಚನೆಗೊಂಡಿದ್ದಾರೆ. ಈ ಸಂಬಂಧ ನಡೆಸಲಾಗುವ ಶಿಬಿರಗಳಲ್ಲಿ ತಂತ್ರಜ್ಞಾನಗಳ ಬಗೆಗೂ ತರಬೇತಿ ನೀಡಲಾಗುತ್ತಿದೆ.

 ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಪಕ್ಷಿ ವೀಕ್ಷಕರಿರುವ ಪ್ರದೇಶ ಕಿದೂರು ಗ್ರಾಮವಾಗಿದೆ. ಅರಣ್ಯ-ಸಮಾಜಜಾಗೃತಿ ಇಲಾಖೆ ಸಿಬ್ಬಂದಿ, ಪಕ್ಷಿ ವೀಕ್ಷಕರು ಇತರರಿಗೆ ಮಾರ್ಗದರ್ಶಿಗಳಾಗಿ ಶಿಬಿರಗಳಲ್ಲಿ ಇರುತ್ತಾರೆ. ವಿಶ್ವದ ಅತಿದೊಡ್ಡ ಹಕ್ಕಿ ಗಳ ಕುರಿತು ಮಾಹಿತಿ ನೀಡುವ ಸಾರ್ವಜನಿಕ ಒಕ್ಕೂಟ “ಇ-ಬರ್ಡ್”ನಲ್ಲಿಕಿದೂರಿನಲ್ಲಿ ಪತ್ತೆಯಾಗಿರುವ ಸುಮಾರು 160 ಪಕ್ಷಿಜಾತಿಗಳ ಹೆಸರು ನೋಂದಣಿಯಾಗಿದೆ. 

ಶಾಲಾ ಶಿಕ್ಷಕ ರಾಜು ಕಿದೂರು, ಎಂ.ಎಸ್.ಸಿ.ವಿದ್ಯಾರ್ಥಿ ಮಾಕ್ಸಿಂ ರಾಡ್ರಿಗಸ್, ಪ್ರಶಾಂತ್ ಕೃಷ್ಣ, ರಾಯಲ್ ಪ್ರದೀಪ್, ಹತ್ತನೇ ತರಗತಿ ವಿದ್ಯಾರ್ಥಿ ಗ್ಲಾಂಡ ಪ್ರಿತೀಷ್ ಮೊದಲಾದವರು ಸ್ಥಳೀಯ ಪಕ್ಷಿ ವೀಕ್ಷಣೆಗೆ ನೇತೃತ್ವ ವಹಿಸುತ್ತಿದ್ದಾರೆ. ಪಕ್ಕಿಧಾಮ ಆರಂಭಗೊಂಡರೆ ಕಿದೂರು ಗ್ರಾಮಟದ ಒಟ್ಟಂದ ಮಾರ್ಪಾಟುಗೊಳ್ಳಲಿದೆ. ಜೀವಜಾಲದ ಕುರಿತು ಸಹಬಾಳ್ವೆಯ ಸಂದೇಶವೂ ಜಗತ್ತಿಗೆ ಸಾರಿದಂತಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು