ಮಾಗಡಿ: ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಹುಟ್ಟೂರು ಮಾಗಡಿಯಲ್ಲಿ ಅಘೋಷಿತ ಬಂದ್ ಏರ್ಪಟ್ಟಿತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶಿವಕುಮಾರ ಸ್ವಾಮೀಜಿಗಳಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಅಭಿಮಾನಿಗಳು ಮಂಗಳವಾರ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಸ್ವಯಂ ಘೋಷಿತವಾಗಿ ಬಂದ್ ಮಾಡುವಂತೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆಯಿಂದಲೇ ಮುಚ್ಚುವ ಮೂಲಕ ಶ್ರೀಗಳಿಗೆ ಭಾವಪೂರ್ಣ ನಮನ ಸಲ್ಲಿಸಿದರು.
ಮಾಗಡಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು, ಅಂಗಡಿ ಮತ್ತು ಪ್ರಮುಖ ಸರ್ಕಲ್ಗಳಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಬ್ಯಾನರ್ ಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಮಾಗಡಿ ತಾಲೂಕಿನವರೇ ಆದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಮಾಗಡಿಯಲ್ಲಿ ಅಭೂತ ಪೂರ್ವ ಶ್ರದ್ಧಾಂಜಲಿ ಅರ್ಪಿಸಲಾಯಿತು.