ಬೆಳ್ತಂಗಡಿ: ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಏಳನೇ ದಿನವಾದ ಶುಕ್ರವಾರ ಸಮವಸರಣ ಪೂಜಾ ಕಾರ್ಯಕ್ರಮ ಅಮೃತವರ್ಷಿಣಿ ಸಭಾಭವನದ ಹಿಂಬದಿಯಲ್ಲಿ ಕಲಾತ್ಮಕವಾಗಿ ರಚನೆ ಮಾಡಿದ್ದ ಮಂಟಪದಲ್ಲಿ ಭಕ್ತಿ ಶ್ರದ್ಧೆಗಳಿಂದ ನೆರವೇರಿತು. ಸುಪ್ರಿಯಾ ಹಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಟಪವನ್ನು ರಚಿಸಲಾಗಿತ್ತು.
ಸರ್ವಾಹ್ಣಯಕ್ಷ ಧರ್ಮಚಕ್ರದೊಂದಿಗೆ ಶ್ರೀಚಂದ್ರನಾಥ ಸ್ವಾಮಿಯ ವಿಹಾರಪೂರ್ವಕ ದೇವರನ್ನು ಪ್ರಭಾವಳಿಯೊಂದಿಗೆ ಬೀಡಿನಿಂದ ಸಮವಸರಣ ಮಂಟಪಕ್ಕೆ ಹೊತ್ತುಕೊಂಡು ಆನೆ, ಛತ್ರ, ಚಾಮರ, ಚೆಂಡೆ, ಬ್ಯಾಂಡ್, ವಾಲಗದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಆಚಾರ್ಯ ವರ್ಧಮಾನ ಸಾಗರ್ಜೀದ ಮಹಾರಾಜ್, ಆಚಾರ್ಯ ಪುಷ್ಪದಂತ ಸಾಗರ ಮುನಿಮಹಾರಾಜ್, ವಿವಿಧ ಜೈನ ಮಠಗಳ ಯತಿಗಳು, ತ್ಯಾಗಿಗಳು ಹಾಗೂ ಆರ್ಯಿಕಾ ಮಾತಾಜಿ, ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ, ಹಾಗು ಶ್ರಾವಕರ ಸಮ್ಮುಖದಲ್ಲಿ ಸಮವಸರಣ ಪೂಜೆ ಪ್ರಾರಂಭವಾಯಿತು.
ಜೈನ ಪದ್ಧತಿಯ ಪ್ರಕಾರ ಮೊದಲಿಗೆ ನಾಲ್ಕು ದಿಕ್ಕುಗಳಿಂದ ಧರ್ಮಸಭೆಗೆ ಸ್ವಾಗತ ಕೋರಲಾಯಿತು. ಯಕ್ಷಗಾನ ಆಗಮನವನ್ನು ಏನು ರಮ್ಯ, ಏನು ಸೌಮ್ಯ ಎಂಬ ಯಕ್ಷಗಾನ ನೃತ್ಯದ ಮೂಲಕ ಸ್ವಾಗತಿಸಿದ್ದು, 32 ವೇಷಧಾರಿಗಳು ಸಮವಸರಣದ ಸುತ್ತ ನೃತ್ಯಮಾಡಿದ್ದು ಆಕರ್ಷಣೀಯವಾಗಿತ್ತು. ಇಂದ್ರನ ಅಪ್ಪಣೆಯಂತೆ ಕುಬೇರನಿಂದ ನಿರ್ಮಾಣಗೊಂಡ ಮಂಟಪದಲ್ಲಿ ಧೂಳೀ ಶಾಲ ಕೋಟೆ, ಮಾನಸ್ತಂಭಗಳು, ಪ್ರಾಸಾದ ಚೈತ್ರಭೂಮಿ, ಜಲಖಾತಿಕಾ ಭೂಮಿ, ಲತಾವನ ಭೂಮಿ, ಮೊದಲನೇ ಕೋಟೆ, ಗೋಪುರಗಳು, ನಾಟ್ಯ ಶಾಲೆಗಳು, ಉಪವನ ಭೂಮಿ, ಲತಾವನ ಭೂಮಿ, ಎರಡನೇ ಕೋಟೆ, ಕಲ್ಪವೃಕ್ಷ ಭೂಮಿ, ಭವನ ಭೂಮಿ, ಸ್ತೂಪಗಳು, ಮೂರನೇ ಕೋಟೆ, ದ್ವಾದಶಗಣ ಭೂಮಿ, ತ್ರಿಪಿಠ ಭೂಮಿ, ಗಂಧಕಿಟಿ, ದಿವ್ಯಧ್ವನಿಯ ಕಲ್ಪನೆಯೊಂದಿಗೆ ರಚಿಸಿರುವ ವರ್ಣನೆಯನ್ನು ಮಾಡಲಾಯಿತು.
ಈ ಸಂದರ್ಭ ಗುರುವಾರ ಯುದ್ದಲ್ಲಿ ಪರಾಜಿತನಾದ, ಬಾಹುಬಲಿಯ ವೈರಾಗ್ಯತೆಯಿಂದ ನೊಂದ ಚಕ್ರವರ್ತಿ ಭರತ ಅರಮನೆಯ ಪರಿವಾರದ ಜೊತೆಗೆ ಆದಿನಾಥನ ಸಮವಸರಣದ ಮಂಟಪಕ್ಕೆ ಪತ್ನಿ ಸುಭದ್ರೆಯೊಂದಿಗೆ ಅಗಮಿಸುತ್ತಾನೆ. ತನ್ನ ಕಿರೀಟವನ್ನು ಮಂತ್ರಿಗೆ ಒಪ್ಪಿಸಿ, ಪರಿವಾರವನ್ನು ಹೊರಗೆ ನಿಲ್ಲಿಸಿ ನೇರವಾಗಿ ಮಂಟಪವನ್ನು ಪ್ರವೇಶಿಸುವ ದೃಶ್ಯ ಅನಾವರಣಗೊಳ್ಳುತ್ತದೆ. ತಮ್ಮ ಬಾಹುಬಲಿಗೆ ಕೇವಲ ಜ್ಞಾನ ಇನ್ನೂ ಪ್ರಾಪ್ತವಾಗದಿರುವ ಬಗ್ಗೆ ಕಾರಣವೇನೆಂದು ತೀರ್ಥಂಕರರೆದುರು ಪ್ರಶ್ನಿಸುತ್ತಾನೆ. ಆಗ ಅಶರೀರವಾಣಿಯೊಂದು ಮೊಳಗಿ ಅಧಿಕಾರದ ವ್ಯಾಮೋಹವನ್ನು ತ್ಯಜಿಸಿ ಬಾಹುಬಲಿ ಹೊರಟು ನಿಂತಾಗ ಭರತನ ಸೈನಿಕರು ನಿಂದಿಸಿರುವುದನ್ನು, ನೀನು ಎಲ್ಲಿ ಹೋದರು ಅದು ಭರತ ಚಕ್ರವರ್ತಿಯ ಜಾಗವೇ ಆಗಿರುತ್ತದೆ ಎಂದು ಚುಚ್ಚಿ ಮಾತನಾಡಿದ್ದನ್ನು ನೆನಪು ಮಾಡುತ್ತದೆಯಲ್ಲದೆ ಇದು ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗಲು ಅಡ್ಡಿಯಾಗುತ್ತಿರುವುದನ್ನು ವಿವರಿಸುತ್ತದೆ. ಇದಕ್ಕೆ ಪರಿಹಾರವನ್ನೂ ಸೂಚಿಸುವ ಅಶರೀರವಾಣಿ ಭರತನೇ ಅಲ್ಲಿಗೆ ತೆರಳಿ ಕಾಲಿಗೆ ಬಿದ್ದರೆ ಮಾತ್ರ ಆತನಿಗೆ ಕೇವಲ ಜ್ಞಾನ ಸಿದ್ದಿಸುತ್ತೆ ಎಂದೂ ತಿಳಿಸುತ್ತದೆ. ಇದಕ್ಕೆ ಸಮ್ಮತಿಸಿದ ಭರತೇಶ ತೀರ್ಥಂಕರರ ಪೂಜೆ, ಅಷ್ಟೋತ್ತರ ಪೂಜೆ, ಯತಿಗಳಿಗೆ, ಮಾತಾಜಿಯವರಿಗೆ ಸಭಾವಂದನೆ ಸಲ್ಲಿಸಿ ಮಂಗಲ ಪೂಜೆಯ ಬಳಿಕ ತೆರಳುತ್ತಾನೆ. ಮೂರು ಬಾರಿ ಓಂಕಾರ, ತೀರ್ಥಂಕರರ ದಿವ್ಯೋಪದೇಶದ ದಿವ್ಯಧ್ವನಿ ಕೇಳಿಸುತ್ತದೆ. ಮಂಗಲ ಪೂಜೆಯ ನಂತರ ಮುನಿಗಳ ಜೊತೆಗೆ ಗಣಧರ ಪ್ರಶ್ನೋತ್ತರ ನಡೆಯುತ್ತದೆ. ಕೊನೆಯಲ್ಲಿ ಸರ್ವಾಹ್ಣ ಯಕ್ಷನ ಶ್ರೀವಿಹಾರ ಮೆರವಣಿಗೆಯೊಂದಿಗೆ ಬೀಡಿಗೆ ತೆರಳುತ್ತದೆ.