ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಚತುರ್ಥ ಮಹಾ ಮಜ್ಜನದ ಏಳನೆಯ ದಿನವಾದ ಮಾಘ ಶುದ್ಧ ದಶಮಿಯ ದಿನವಾದ ಶುಕ್ರವಾರದಂದು ಪ್ರಾತಃಕಾಲ ಗಂಟೆ 8 ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ, ಬಿಂಬಶುದ್ಧಿ ವಿಧಾನ, 216 ಕಲಶಗಳಿಂದ ಪಾದಾಭೀಷೇಕ, ಮಧ್ಯಾಹ್ನ 2 ರಿಂದ ಲಘು ಸಿದ್ದಚಕ್ರ ಆರಾಧನೆ. ಬೃಹತ್ ಸಿದ್ಧಚಕ್ರದ ಪುಷ್ಪಾರ್ಚನೆ, ಸಂಜೆ ಧ್ವಜಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನೆರವೇರಿತು.
ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 3 ಗಂಟೆಯಿಂದ ಮುನಿ ಸಂಘದವರಿಂದ ಮಂಗಳ ಪ್ರವಚನ, ಸಂಜೆ 7 ಗಂಟೆಯಿಂದ ಯಕ್ಷ ಸಂಜೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಭರತಾಗಮನ ಯಕ್ಷಗಾನ ಪ್ರದರ್ಶನ ಪ್ರಸ್ತುತಗೊಂಡಿತು.
ಇಂದಿನ ಕಾರ್ಯಕ್ರಮಗಳು:
ರತ್ನಗಿರಿಯಲ್ಲಿ: ಮಾಘ ಶುದ್ಧ ಏಕಾದಶಿಯಂದು (ಫೆ. 16) ಪ್ರಾತಃಕಾಲ ಗಂಟೆ 6-30ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ ಬೆಳಿಗ್ಗೆ ಗಂಟೆ 8-45ರಿಂದ ಮೀನ ಲಗ್ನದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಚತುರ್ಥ ಮಹಾ ಮಸ್ತಕಾಭಿಷೇಕ. ಪ್ರತಿಷ್ಠಾಪಕ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ-ಹೇಮಾವತಿ ವೀ ಹೆಗ್ಗಡೆ ದಂಪತಿಯಿಂದ, ಹೆಗ್ಗಡೆ ಕುಟುಂಬಸ್ಥರಿಂದ ಹಾಗೂ ಶ್ರಾವಕರಿಂದ ಬಾಹುಬಲಿ ಸ್ವಾಮಿಗೆ ಪ್ರಥಮ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ. ಸಂಜೆ ಧ್ವಜ ಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನೆರವೇರಲಿದೆ.
ಧರ್ಮಸ್ಥಳದಲ್ಲಿ 12 ವರ್ಷದ ಬಳಿಕ ಇದೀಗ ಮತ್ತೊಮ್ಮೆ ಮಂದಸ್ಮಿತನಿಗೆ ಮಹಾಮಜ್ಜನ ನೆರವೇರಲಿದೆ. 1982ರಲ್ಲಿ ಜ. 25ರಿಂದ ಫೆ. 4 ರವರೆಗೆ, 1995ರಲ್ಲಿ ಫೆ. 5 ರಿಂದ 10 ರವರೆಗೆ, 2007ರಲ್ಲಿ ಜ. 28 ರಿಂದ ಫೆ. 2 ರವರೆಗೆ ನಡೆದಿತ್ತು.
1008 ಕಲಶಗಳ ಜಲಾಭಿಷೇಕದ ಮೂಲಕ ಮಹಾಮಸ್ತಕಾಭಿಷೇಕ ಪ್ರಾರಂಭಿಸಲಾಗುತ್ತದೆ. ಕಲಶಗಳು ಭರತಖಂಡದ 16 ಪುಣ್ಯ ನದಿಗಳ ಜಲವನ್ನು ತಂದು ಆ ಎಲ್ಲ ಜಲದೇವತೆಗಳೂ ಬಾಹುಬಲಿಯನ್ನು ಆರಾಧಿಸಿ-ಸಂರಕ್ಷಿಸುತ್ತಾರೆ ಎಂಬ ಸಂಕಲ್ಪದಿಂದ ಕೂಡಿರುತ್ತದೆ. ಬಳಿಕ 300 ಲೀ ಎಳನೀರು, 200ಲೀ ಕಬ್ಬಿನ ರಸ (ಇಕ್ಷು ರಸ), 600 ಲೀ. ಹಾಲು (ಕ್ಷೀರ), 50 ಕೆ.ಜಿ. ಅಕ್ಕಿಹಿಟ್ಟು (ಕಲ್ಕಚೂರ್ಣ), 100 ಕೆ.ಜಿ ಅರಸಿನ ಹುಡಿಯಿಂದ ಮಾಡಿದ 500 ಲೀ. ದ್ರವ್ಯ, ವಿವಿಧ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ 200 ಲೀ., 100 ಕೆ.ಜಿ. ಶ್ರೀಗಂಧದ ಹುಡಿಯಿಂದ ಮಾಡಿದ 500ಲೀ ದ್ರವ್ಯ, 75 ಕೆ.ಜಿ. ರಕ್ತಚಂದನದ ಹುಡಿಯಿಂದ ತಯಾರಿಸಿದ 500 ಲೀ. ದ್ರವ್ಯ, 75 ಕೆ.ಜಿ. ಅಷ್ಟಗಂಧದ ಹುಡಿಯಿಂದ ಮಾಡಿದ 500 ಲೀ. ದ್ರವ್ಯ, 100 ಗ್ರಾಮ್ ಕೇಸರಿಯ 500 ಲೀ. ದ್ರವ್ಯಗಳಿಂದ ಬಾಹುಬಲಿಗೆ ರಂಗಿನೋಕುಳಿ ನಡೆಯುತ್ತದೆ. ಬಳಿಕ ಕನಕಾಭಿಷೇಕ, ವಿವಿಧ ತಾಜಾ ಹೂಗಳ ಪಕಳೆಗಳಿಂದ ಪುಷ್ಟ ವೃಷ್ಟಿ, ನಂತರ 35 ಅಡಿ ಉದ್ದದ ಗೊಂಡೆ ಹೂ ಮಾಲೆಯನ್ನು ಏರಿಸಲಾಗುತ್ತದೆ. ಕೊನೆಯಲ್ಲಿ ಮಹಾಮಂಗಳಾರತಿಯೊಂದಿಗೆ ದಿನದ ಮಸ್ತಕಾಭಿಷೇಕ ಕೊನೆಗೊಳ್ಳುತ್ತದೆ.
39 ಅಡಿಯ ಬೃಹತ್ ಮೂರ್ತಿಗೆ ಸತತ ನಾಲ್ಕನೇ ಬಾರಿ ಮಹಾಭಿಷೇಕ ನಡೆಸುವ ಸುಯೋಗ ಡಾ| ಹೆಗ್ಗಡೆಯವರಿಗೆ ಪ್ರಾಪ್ತವಾಗಲಿದೆ. ಜೈನ ಪರಂಪರೆಯವರಾಗಿರುವ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯ, ಅಣ್ಣಪ್ಪ ಸ್ವಾಮಿಯ ಪರಮ ಭಕ್ತರು. ಬಾಹುಬಲಿ ಸ್ವಾಮಿಯ ಮೂರ್ತಿಯನ್ನು 1982 ರಲ್ಲಿ ಸ್ಥಾಪಿಸಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಬಾಹುಬಲಿಯ ಮೂರ್ತಿಯ ಹಿಂದುಗಡೆ ಬೃಹತ್ ಆಕರ್ಷಕ 62 ಅಡಿ ಎತ್ತರದ ಅಟ್ಟೊಳಿಗೆಯನ್ನು ನಿರ್ಮಿಸಲಾಗಿದೆ. ಮೂರ್ತಿಯ ಎದುರು ಭಾಗದ ಎಡಬಲಗಳಲ್ಲಿ ಎರಡು ಅಂತಸ್ತಿನ ಗ್ಯಾಲರಿಯನ್ನು ಕಬ್ಬಿಣದ ರಾಡ್ಗರಳನ್ನು ಉಪಯೋಗಿಸಿ ನಿರ್ಮಾಣ ಮಾಡಿದ್ದು 6000 ಮಂದಿ ಕುಳಿತು ಅಭಿಷೇಕವನ್ನು ವೀಕ್ಷಿಸಬಹುದಾಗಿದೆ.
ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿದ್ದು, ರತ್ನಗಿರಿಗೆ ಹೋಗಿ ಮಸ್ತಕಾಭಿಷೇಕ ನೋಡಲು ಉಚಿತ ವಾಹನ ಸೌಲಭ್ಯವಿದೆ.
ಅಮೃತವರ್ಷಿಣಿ ಮಂಟಪದಲ್ಲಿ: ಸಂಜೆ 3 ಗಂಟೆಯಿಂದ ಮುನಿ ಸಂಘದವರಿಂದ ಮಂಗಲ ಪ್ರವಚನ, ಸಂಜೆ 7 ಗಂಟೆಯಿಂದ ಬೆಂಗಳೂರಿನ ಉಸ್ತಾದ್ ಫಯಾಸ್ ಖಾನ್ ಮತ್ತು ಬಳಗದವರಿಂದ ದಾಸ ಗೀತಿಕೆ, ಚೆನ್ನೈನ ಶೀಲಾ ಉನ್ನಿಕೃಷ್ಣನ್ ಮತ್ತು ಬಳಗದವರಿಂದ ನಾಟ್ಯಾಯಾನ, ಒಡಿಸ್ಸಾದ ಒರಿಸ್ಸಾ ಡ್ಯಾನ್ಸ್ ಅಕಾಡೆಮಿಯ ಅರುಣ್ ಮೋಹಾಂತಿ ಅವರಿಂದ ಒಡಿಸ್ಸಿ ನೃತ್ಯೋತ್ಸವ ನಡೆಯಲಿದೆ.
ನಾಳಿನ ಕಾರ್ಯಕ್ರಮಗಳು:
ರತ್ನಗಿರಿಯಲ್ಲಿ: ಮಾಘ ಶುದ್ಧ ದ್ವಾದಶಿ(ಫೆ. 17) ಭಾನುವಾರದಂದು ಪ್ರಾತಃಕಾಲ ಗಂಟೆ 6-30ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ, ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ, ಸಂಜೆ ಧ್ವಜಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿ ನಡೆಯಲಿದೆ.
ಅಮೃತವರ್ಷಿಣಿ ಸಭಾಭವನದಲ್ಲಿ: ಸಂಜೆ 7 ರಿಂದ ಶಂಕರ್ ಮಹಾದೇವನ್, ಸಿದ್ಧಾರ್ಥ ಮಹಾದೇವನ್, ಶಿವಂ ಮಹಾದೇವನ್ ಮತ್ತು ತಂಡದವರಿಂದ ಗಾನ ನಿನಾದ, ಅಂತರಾಷ್ಟ್ರೀಯ ಕಲಾವಿದ ವಿಲಾಸ್ ನಾಯಕ್ ಅವರಿಂದ ಚಿತ್ರ ಚಮತ್ಕಾರ ಪ್ರದರ್ಶನಗೊಳ್ಳಲಿದೆ.