ಮಳವಳ್ಳಿ: ಪಟ್ಟಣದ ದೊಡ್ಡಕೆರೆ ಹಾಗೂ ಮಾರೆಹಳ್ಳಿ ಕೆರೆ ಸೇರಿದಂತೆ ಕಲ್ಕುಣಿ, ಮಿಕ್ಕೆರೆ, ವಡ್ಡರಹಳ್ಳಿ, ಚೊಟ್ಟನಹಳ್ಳಿ, ಬಿ.ಜಿ.ಪುರ ಹಲಗೂರು ಸೇರಿದಂತೆ ಗ್ರಾಮದಲ್ಲಿರುವ ಕೆರೆ ಕಟ್ಟೆಗಳು ಬರಕ್ಕೆ ಬತ್ತಿ ಹೋಗುತ್ತಿರುವುದರಿಂದ ಜನ ಭಯಪಡುವಂತಾಗಿದೆ.
ಈಗಾಗಲೇ ಬಿಸಿಲಿನ ತೀವ್ರತೆಗೆ ಕಾಡಿನಲ್ಲಿ ಮರಗಿಡಗಳು ಒಣಗಿದ್ದರಿಂದ ಕಾಡ್ಗಿಚ್ಚಿಗೆ ಅರಣ್ಯವೂ ನಾಶವಾಗಿದೆ. ಇದರಿಂದ ಪ್ರಾಣಿಗಳು ಮೇವು, ನೀರಿನಲ್ಲದೆ ಪರದಾಡುವಂತಾಗಿದೆ. ಇನ್ನು ತಾಲೂಕಿನಾದ್ಯಂತ ಒಂದು ಸುತ್ತು ಹೊಡೆದರೆ ಬಹಳಷ್ಟು ಗ್ರಾಮಗಳಲ್ಲಿರುವ ಕೆರೆ-ಕಟ್ಟೆಗಳು ಬತ್ತಿಹೋಗುತ್ತಿರುವುದು ಕಂಡು ಬರುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳು ಬತ್ತಿರುವುದರಿಂದ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಇನ್ನೊಂದೆಡೆ ಕುಡಿಯುವ ನೀರಿಗೂ ತಾತ್ವಾರ ಬಂದಿದ್ದು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಗ್ರಾಮದ ಕೆಲವರು ಅಕ್ಕ ಪಕ್ಕದ ಜಮೀನಿನ ಬೋರ್‍ವೆಲ್‍ನಿಂದ ನೀರು ತಂದು ಉಪಯೋಗಿಸುವಂತಾಗಿದೆ.
ಇನ್ನು ಅಂತರ್ಜಲ ವೃದ್ಧಿಗಾಗಿ ಸರ್ಕಾರ ಕೈಗೊಂಡ ಕ್ರಮಗಳು ಮಣ್ಣು ಪಾಲಾಗಿವೆ ಎಂದರೆ ತಪ್ಪಾಗಲಾರದು, ದೊಡ್ಡಕೆರೆ, ಮಾರೆಹಳ್ಳಿ ಸೇರಿದಂತೆ ಹಲವು ಕೆರೆಗಳ ಹೂಳೆತ್ತುವುದರಲ್ಲಿ ನಡೆದ ಕಾಮಗಾರಿಯಲ್ಲಿನ ಭ್ರಷ್ಟತೆ ಹಾಗೂ ಈ ಯೋಜನೆಯ ಕಳಪೆ ಕಾಮಗಾರಿಗೆ ಸೂಕ್ತ ಕ್ರಮವಹಿಸದ ಅಧಿಕಾರಿಗಳ ನಿರ್ಲಕ್ಷತೆಯಿಂದ ದೊಡ್ಡಕೆರೆ ಮತ್ತು ಮಾರೆಹಳ್ಳಿ ಕೆರೆಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ಬಂದು ತಲುಪಿವೆ.
ಈಗಾಗಲೇ ಜಾನುವಾರುಗಳ ನೀರು, ಮೇವಿಗೆ ಕೊರತೆಯುಂಟಾಗಿರುವುದರಿಂದ ಅವುಗಳನ್ನು ಸಾಕಿ ಸಲಹುದು ಕಷ್ಟವಾಗಿರುವುದರಿಂದ ಕೆಲವರು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ರೈತರು ಸಂಕಷ್ಟ ಪಡಬೇಕಾಗಿರುವುದರಿಂದ ಕೂಡಲೇ ತಾಲೂಕು ಆಡಳಿತ ಜಾನುವಾರುಗಳ ಮೇವಿಗೆ ಹಾಗೂ ಕುಡಿಯುವ ನೀರಿಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಕಾಡಿನಲ್ಲಿ ನೀರು, ಆಹಾರ ಸಿಗದೆ ಕಾಡು ಪ್ರಾಣಿಗಳು ಕೂಡ ನಾಡಿನತ್ತ ಬರುವಂತಾಗಿದ್ದು, ರೈತರ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಶಿಂಷಾ, ನೆಟ್ಕಲ್, ಹೆಬ್ಬಣಿ, ಮುತ್ತತ್ತಿ ಮೊದಲಾದ ಅರಣ್ಯ ಪ್ರದೇಶದಲ್ಲಿ ಆನೆಗಳು, ಜಿಂಕೆಗಳು, ಕೋತಿಗಳು ನೀರಿಲ್ಲದೆ ವಲಸೆ ಹೋಗುತ್ತಿವೆ. ಒಟ್ಟಾರೆ ಬರದಿಂದ ಹತ್ತು ಹಲವು ಸಮಸ್ಯೆಗಳು ಸೃಷ್ಠಿಯಾಗುತ್ತಿದ್ದು ಮಳೆಯಾಗಿ ಕೆರೆಗಳಲ್ಲಿ ನೀರು ಕಾಣಿಸಿಕೊಂಡರೆ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿದೆ.