ಕಾರವಾರ: ಹಬ್ಬ ಅಥವಾ ವಿಶೇಷ ದಿನಗಳ ನೆಪದಲ್ಲಿ ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ಬಸ್‍ಗಳ ಸೀಟು ದಂಧೆ ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ. ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಬೆಂಗಳೂರು ಅಥವಾ ಬೇರೆಡೆಯಿಂದ ಕಾರವಾರಕ್ಕೆ ಆಗಮಿಸುವ ಅಥವಾ ತೆರಳುವ ಖಾಸಗಿ ಬಸ್‍ಗಳಲ್ಲಿ ಸೀಟುಗಳು ಇದ್ದರೂ ಕಾಯ್ದಿರಿಸಿ ಬೇಡಿಕೆ ಹೆಚ್ಚಿಸಿಕೊಂಡು ಹೆಚ್ಚಿನದರಕ್ಕೆ ಸೀಟು ನೀಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳಿವೆ.
ಈ ಹಿನ್ನೆಲೆಯಲ್ಲಿ ದಿಢೀರ್ ದಾಳಿ ಮಾಡಿ ಖಾಸಗಿ ಬಸ್‍ಗಳ ಈ ಸೀಟು ದಂಧೆಯನ್ನು ನಿಯಂತ್ರಿಸುವಂತೆ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಈ ನೆಲದ ಕಾನೂನು ಎಲ್ಲರಿಗೂ ಒಂದೆ. ಸ್ಪರ್ಧಾತ್ಮಕ ವ್ಯವಹಾರಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಅನ್ಯಾಯವಾಗುವುದನ್ನು ಸಹಿಸಲಾಗದು. ಈ ಬಗ್ಗೆ ಖಾಸಗಿ ಮಾಲೀಕತ್ವದ ಬಸ್‍ಗಳ ಇಂತಹ ವ್ಯವಹಾರಗಳನ್ನು ನಿಯಂತ್ರಸಬೇಕು. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅಪಘಾತಗಳು ಇಳಿಮುಖವಾಗಿರುವುದು ಸಮಾಧಾನಕರ, ಆದರೂ ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಅಪಘಾತಗಳಿಗೆ ಕಾರಣಗಳನ್ನು ತಿಳಿದು ಸರಿಪಡಿಸಬೇಕಿದೆ ಎಂದರು.
ಇತ್ತೀಚಿಗೆ ಕೇಂದ್ರ ಸರ್ಕಾರದ ಮಾರ್ಗ ಸೂಚಿಸಿಯಂತೆ ನಿಯಮ ಉಲ್ಲಂಘಿಸಿದ ರಸ್ತೆ ಸವಾರರ ಮೇಲೆ ದಂಡ ವಿಧಿಸುತ್ತಿರುವುದೂ ಅಪಘಾತಗಳು ಕಡಿಮೆಯಾಗುತ್ತಿರುವುದಕ್ಕೆ ಕಾರಣವಿರಬಹುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಂತಿಮವಾಗಿ ವಾಹನ ಸವಾರರ ಸುರಕ್ಷತೆ ಹಿತದೃಷ್ಟಿಯಿಂದಲೇ ನಿಯಮಗಳ ಅನುಷ್ಠಾನವನ್ನು ಕಠಿಣಗೊಳಿಸಲಾಗಿದೆ ಎಂದರು.
ಯಾವುದೇ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಾಗ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಕಾಮಗಾರಿ ಅಂದಾಜು ಪಟ್ಟಿತಯಾರಿಸುವಾಗಲೇ ದೂರದೃಷ್ಟಿ ಇರಬೇಕು. ತಿರುವುಗಳಲ್ಲಿ ಎಚ್ಚರಿಕೆ ಫಲಕಗಳು, ತಡೆಗೋಡೆ, ರಸ್ತೆ ಉಬ್ಬು ತಗ್ಗುಗಳು ಅಥವಾ ರಸ್ತೆ ಅಂಚಿನ ರಸ್ತೆಯ ನಿರ್ಮಾಣವೂ ವಾಹನ ಸಂಚಾರಕ್ಕೆ ಪೂರಕವಾಗಿರಬೇಕು. ಜಿಲ್ಲೆಯಲ್ಲಿ ಗುರುತಿಸಲಾಗಿರುವ 36 ಅತಿ ಹೆಚ್ಚು ಅಪಘಾತದ ಜಾಗಗಳ ರಸ್ತೆಯನ್ನು ಸುಧಾರಿಸಬೇಕು ಎಂದು ಅವರು ತಿಳಿಸಿದರು.
ದ್ವಿಚಕ್ರ ವಾಹನ ಸವಾರರೇ ಹೆಚ್ಚು ಅಪಘಾತದಲ್ಲಿ ಮೃತಪಡುತ್ತಿರುವ ಬಗ್ಗೆ ವರದಿಯಾಗುತ್ತಿದ್ದು ಲೈಸೆನ್ಸ್ ನೀಡುವ ನಿಯಮಗಳನ್ನು ಕಠಿಣಗೊಳಿಸಬೇಕು ಹಾಗೂ ಹೆಚ್ಚು ನಿಯಮ ಉಲ್ಲಂಘಿಸಿದರೆ ಚಾಲನಾ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಸೂಚಿಸಿದರು.