ಮಡಿಕೇರಿ: ಕಂದಾಯ ಇಲಾಖೆಯ ಮಡಿಕೇರಿ ಕಂದಾಯ ಪರಿವೀಕ್ಷಕರ ಕಚೇರಿಯನ್ನು ಯಾವುದೇ ಕಾರಣಕ್ಕೂ ನಗರದಿಂದ ದೂರದಲ್ಲಿರುವ ವಾರ್ತಾಭವನದ ಬಳಿಗೆ ಸ್ಥಳಾಂತರಿಸಬಾರದು ಎಂದು ನಗರಸಭಾ ಮಾಜಿ ಸದಸ್ಯ ಟಿ.ಎಂ.ಅಯ್ಯಪ್ಪ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಬಿ.ಬಿದ್ದಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೋಟೆ ಆವರಣದಿಂದ ಸರಕಾರಿ ಕಚೇರಿಗಳು ಸ್ಥಳಾಂತರಗೊಳ್ಳುತ್ತಿದ್ದು, ಕಂದಾಯ ಪರಿವೀಕ್ಷಕರ ಕಚೇರಿ ಕೂಡ ಬೇರೆ ನೆಲೆಯನ್ನು ಕಂಡುಕೊಳ್ಳುವ ಆತುರದಲ್ಲಿದೆ. ಜನರ ಹಿತವನ್ನು ಕಡೆಗಣಿಸಿ ದೂರದ ಪ್ರದೇಶಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಕಷ್ಟ, ನಷ್ಟ ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಕಚೇರಿ ಪಕ್ಕದಲ್ಲೇ ಕೆಲವು ಕೊಠಡಿಗಳು ಖಾಲಿ ಬಿದ್ದಿವೆ. ಇದರ ಬಳಿಯೇ ಇರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಜಿ.ಪಂ ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಶಿಕ್ಷಣ ಅಧಿಕಾರಿಗಳಿದ್ದ ಕೊಠಡಿಗಳಿಗೆ ಕಂದಾಯ ಕಚೇರಿಯನ್ನು ಸ್ಥಳಾಂತರಗೊಳಿಸಲು ಎಲ್ಲಾ ಅವಕಾಶಗಳಿತ್ತು. ಅಲ್ಲದೆ ತಾಲ್ಲೂಕು ಪಂಚಾಯತ್ ಕಚೇರಿಯ ಬಳಿ ಸರಕಾರದ ಬೃಹತ್ ಕಟ್ಟಡವೊಂದಿದ್ದು, ಇದರಲ್ಲಿ ಅನೇಕ ಕೋಣೆಗಳು ಖಾಲಿ ಬಿದ್ದಿವೆ. ಪಕ್ಕದಲ್ಲೇ ಇರುವ ಕೊಠಡಿಗಳಿಗೆ ಕಂದಾಯ ಕಚೇರಿಯನ್ನು ಸ್ಥಳಾಂತರಿಸದೆ ನಿರ್ಜನ ಪ್ರದೇಶದಲ್ಲಿ ಕಚೇರಿ ಆರಂಭಿಸುವ ಉದ್ದೇಶವೇನು ಎಂದು ಅಯ್ಯಪ್ಪ ಹಾಗೂ ಬಿದ್ದಯ್ಯ ಪ್ರಶ್ನಿಸಿದ್ದಾರೆ.
ದೂರದ ವಾರ್ತಾಭವನದ ಪ್ರದೇಶಕ್ಕೆ ಸ್ಥಳಾಂತರಗೊಂಡರೆ ಜನಸಾಮಾನ್ಯರು ಹಾಗೂ ಗ್ರಾಮಸ್ಥರು ಅರ್ಜಿ ವಿಲೇವಾರಿಗಾಗಿ ಆಟೋರಿಕ್ಷಾವನ್ನೇ ಅವಲಂಬಿಸಬೇಕಾಗುತ್ತದೆ. ಇದರಿಂದ ಬಡ ಮಂದಿ ಅದರಲ್ಲೂ ಮಳೆಹಾನಿಯಿಂದ ಕಷ್ಟ, ನಷ್ಟ ಅನುಭವಿಸಿದವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಕಂದಾಯ ಕಚೇರಿಯಲ್ಲಿ ಸಕಾಲದಲ್ಲಿ ಅರ್ಜಿಗಳು ವಿಲೇವಾರಿಯಾಗದ ನೂರಾರು ಕಡತಗಳು ಧೂಳು ಹಿಡಿಯುತ್ತಾ ಬಿದ್ದಿವೆ. ಈ ನಡುವೆ ಕಚೇರಿಯೂ ದೂರದ ಪ್ರದೇಶಕ್ಕೆ ಸ್ಥಳಾಂತರಗೊಂಡರೆ ಬಡ ಗ್ರಾಮೀಣ ಜನರು ಅರ್ಜಿ ವಿಲೇವಾರಿಗಾಗಿ ಪ್ರತೀದಿನ ಆಟೋರಿಕ್ಷಾದಲ್ಲಿ ಅಲೆಯಬೇಕಾದ ದುಸ್ಥಿತಿ ಬಂದೊದಗುತ್ತದೆ. ಇದರ ಬದಲಿಗೆ ತಹಶೀಲ್ದಾರ್ ಕಚೇರಿ ಬಳಿ ಅಥವಾ ಫೀ.ಮಾ.ಕಾರ್ಯಪ್ಪ ವೃತ್ತದ ತಾಲ್ಲೂಕು ಪಂಚಾಯತ್ ಕಚೇರಿ ಬಳಿಯ ಸರಕಾರಿ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಎಲ್ಲಾ ಮಾರ್ಗಗಳಿಂದ ಬಸ್ ಸಂಪರ್ಕ ಸಾಧ್ಯವಾಗುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಅಯ್ಯಪ್ಪ ಹಾಗೂ ಬಿದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರವೇ ಈ ಸಲಹೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತಾದರು ಯಾವುದೇ ಸ್ಪಂದನೆ ದೊರೆತ್ತಿಲ್ಲ. ಜನಪ್ರತಿನಿಧಿಗಳು ಕೂಡ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸದೆ ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ದೂರದ ಪ್ರದೇಶಕ್ಕೆ ಕಂದಾಯ ಪರಿವೀಕ್ಷಕರ ಕಚೇರಿಯನ್ನು ಸ್ಥಳಾಂತರಿಸಿದರೆ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾರ್ವಜನಿಕರ ಸಹಿ ಇರುವ ಮನವಿ ಪತ್ರವನ್ನು ಜಿಲ್ಲಾಡಳಿಕ್ಕೆ ಸಲ್ಲಿಸಿದ್ದಾರೆ.