ಕಾಸರಗೋಡು: ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವಂಬರ್ 20ರಂದು ಮುಷ್ಕರ ನಡೆಸಲು ಖಾಸಗಿ ಬಸ್ ಮಾಲಕರು ತೀರ್ಮಾನಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪದಾಧಿಕಾರಿಗಳು, ಖಾಸಗಿ ಹಾಗೂ ಸಾರ್ವಜನಿಕ ವಲಯ ಒಂದೇ ರೀತಿಯಲ್ಲಿ ಸಂರಕ್ಷಣೆಗೆ ಸಾರಿಗೆ ನೀತಿಯನ್ನು ಜಾರಿಗೆ ತರಬೇಕು, ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಳಗೊಳಿಸಬೇಕು, ಖಾಸಗಿ ಬಸ್ ಗಳಂತೆ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲೂ ವಿದ್ಯಾರ್ಥಿಗಳಿಗೆ ರಿಯಾಯಿತಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೇರಳದಲ್ಲಿ ಖಾಸಗಿ ಬಸ್ ವಲಯ ಅಧಃಪತನದತ್ತ ಸಾಗುತ್ತಿದೆ. ಉದ್ಯಮ ಭಾರೀ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಬಿಡಿಭಾಗಗಳ ಬೆಲೆ ದಿನ ಕಳೆದಂತೆ ಏಕಾಏಕಿ ಏರಿಕೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿಮೆ ಶೇಕಡಾ 65ರಷ್ಟು ಹೆಚ್ಚಳವಾಗಿದೆ. 2019ರಲ್ಲಿ ಪ್ರಯಾಣ ದರ ಏರಿಕೆ ಮಾಡಿದಾಗ ಒಂದು ಲೀಟರ್ ಡೀಸೆಲ್ ಗೆ 64ರೂ. ಇದ್ದಾರೆ ಈಗ 74 ರೂ. ಗೆ ತಲಪಿದೆ. 2011ರಲ್ಲಿ 34 ಸಾವಿರದಷ್ಟು ಖಾಸಗಿ ಬಸ್ಸುಗಳಿದ್ದರೆ, ಈಗ 12,500ಕ್ಕೆ ಇಳಿಕೆಯಾಗಿದೆ, ಖಾಸಗಿ ವಾಹನಗಳ ಹೆಚ್ಚಳದಿಂದ ಬಸ್ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಿದರು
ಮುಷ್ಕರದ ಪೂರ್ವಭಾವಿಯಾಗಿ ನವಂಬರ್ ಆರರಂದು ಬೆಳಗ್ಗೆ 10.30ರಿಂದ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಹಾಗೂ ಬಳಿಕ ವಿದ್ಯಾನಗರ ಬಿ. ಸಿ ರೋಡ್ ನಲ್ಲಿ ಧರಣಿ ನಡೆಯಲಿದೆ. ನವಂಬರ್ 13ರಂದು ತಿರುವನಂತಪುರದ ರಾಜ್ ಭವನ್ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ . ಗಿರೀಶ್, ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾ ಡ್, ಸಿ .ಎ ಮುಹಮ್ಮದ್ ಕು೦ಞ, ಜೊತೆ ಕಾರ್ಯದರ್ಶಿ ಶಂಕರ ನಾಯ್ಕ್, ಉಪಾಧ್ಯಕ್ಷ ಹುಸೈನಾರ್, ಜೊತೆ ಕಾರ್ಯದರ್ಶಿ ಲಕ್ಷ್ಮಣ , ಕೋಶಾಧಿಕಾರಿ ಪಿ . ಎ ಮುಹಮ್ಮದ್ ಕು೦ಞ ಮೊದಲಾದವರು ಉಪಸ್ಥಿತರಿದ್ದರು.