ನಂಜನಗೂಡು: ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ತಡಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಗಡೂರು ಗ್ರಾಮದ ಸಿದ್ದರಾಜು ಪುತ್ರ ಟಿ.ಎಸ್.ಮಹದೇವಪ್ರಸಾದ್(೧೭) ಹಾಗೂ ಕನಕಪುರ ತಾಲೂಕಿನ ಸಂತಕೋಡಿಹಳ್ಳಿ ಗ್ರಾಮದ ಡಿ.ವೈ.ಶ್ರೀನಿವಾಸಗೌಡ ಪುತ್ರ ಕೆ.ಎಸ್.ಪ್ರೀತಂ(೧೭) ಮೃತಪಟ್ಟ ದುರ್ದೈವಿಗಳು.
ಮೃತರು ಮೈಸೂರಿನ ಜೆಸಿಇ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದರು. ಮಹದೇವಪ್ರಸಾದ್ ತನ್ನ ಹುಟ್ಟೂರಾದ ತಗಡೂರಿಗೆ ತನ್ನ ಹಾಸ್ಟಲ್‌ನಲ್ಲಿರುವ ಸಹಪಾಠಿ ಕನಕಪುರ ಮೂಲದ ಕೆ.ಎಸ್.ಪ್ರೀತಂ ಹಾಗೂ ಬಾಲಗಕೋಟೆಯ ಸವಣೂರು ಗ್ರಾಮದ ಈರಬಸಪ್ಪ ಬಸವರಾಜ ಸವಣೂರ್ ಅವರನ್ನು ಭಾನುವಾರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದನು.
ಸೋಮವಾರ ಮಧ್ಯಾಹ್ನ ತಗಡೂರು ರಾಮಚಂದ್ರರಾವ್ ನಾಲೆಯಲ್ಲಿ ಪ್ರೀತಂ ಹಾಗೂ ಮಹದೇವಪ್ರಸಾದ್ ಈಜುಲು ಹೋಗಿದ್ದಾರೆ. ಈ ವೇಳೆ ಸರಿಯಾಗಿ ಈಜಲು ಬಾರದ ಪ್ರೀತಂ ನೀರಿನಲ್ಲಿ ಮುಳುಗಿದ್ದು ಈತನನ್ನು ರಕ್ಷಿಸಲು ಹೋದ ಮಹದೇವಪ್ರಸಾದ್ ಕೂಡ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಾಲೆಯ ದಡದಲ್ಲಿದ್ದ ಇನ್ನೊಬ್ಬ ಸ್ನೇಹಿತ ಈರಬಸಪ್ಪ ಬಸವರಾಜ ಸವಣೂರ್ ಗ್ರಾಮಸ್ಥರಿಗೆ ವಿಷಯವನ್ನು ತಿಳಿಸಿದ ಮೇರೆಗೆ ಸ್ಥಳಕ್ಕೆ ದೊಡ್ಡಕವಲಂದೆ ಹಾಗೂ ಬಿಳಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳಿಗಾಗಿ ಶೋಧನೆ ನಡೆಸಲಾಗುತ್ತಿದೆ.