ಮಡಿಕೇರಿ: ಕೃಷಿಯನ್ನೇ ಪ್ರಧಾನ ವೃತ್ತಿಯನ್ನಾಗಿಸಿಕೊಂಡಿರುವ ಒಕ್ಕಲಿಗ ಸಮುದಾಯ ಇಂದು ಬೇರೆ ಬೇರೆ ಪ್ರಾಂತಗಳಲ್ಲಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಸಂಪ್ರದಾಯಗಳ ಪ್ರಭಾವದಿಂದ ವಿವಿಧ ಹೆಸರುಗಳಿಂದ ಕರೆದು ಕೊಂಡಿದ್ದಾರೆ.
ಈ ನೂರಾರು ಪಂಗಡಗಳು ಮಲೆನಾಡು, ಬಯಲು ಸೀಮೆ, ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಮುಖಂಡತ್ವವನ್ನು ವಹಿಸಿ ಗೌಡರೆಂದು ಖ್ಯಾತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಸ್ವಾಮೀಜಿ ಕರೆ ನೀಡಿದರು.
ಬೆಂಗಳೂರಿನ ಕೊಡಗು ಗೌಡ ಸಮಾಜದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಾಗೂ ಗೌಡ ಸಮಾಜದ ಕೊಠಡಿಗಳನ್ನು ಉದ್ಘಾಟಿಸಿ ಮಹಾ ಸ್ವಾಮಿಜಿಗಳು ಮಾತನಾಡಿದರು.
ಕೊಡಗಿನ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದೊಂದಿಗೆ ಅನನ್ಯ ಭಾವನೆ ಹೊಂದಿದ್ದು, ನಿಕಟವಾದ ಸಂಪರ್ಕವನ್ನು ಹೊಂದಿದ್ದಾರೆ. ಕೊಡಗಿನ ಅರೆಭಾಷೆ ಗೌಡರು ಮಹಾ ಸಂಸ್ಥಾನವನ್ನು ಭಕ್ತಿ, ಪ್ರೀತಿಯಿಂದ ನೋಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ತಮ್ಮ ಮೂಲ ಬೇರುಗಳನ್ನು ನೆನೆಯುವ ಮೂಲಕ ಆಚಾರ, ವಿಚಾಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡಗು ಗೌಡ ಸಮಾಜ ಕಾರ್ಯೋನ್ಮುಖವಾಗಬೇಕೆಂದು ಸ್ವಾಮೀಜಿ ಕರೆ ನೀಡಿದರು.
ರಾಸಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಅರೆಭಾಷೆ ಗೌಡ ಜನಾಂಗದ ಸಂಸ್ಕೃತಿ, ಸಂಪ್ರದಾಯ, ಭಾಷೆ, ಪರಂಪರೆಗಳನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಯುವ ಜನಾಂಗ ಉತ್ಸುಕವಾಗಿರುವುದು ಹೆಮ್ಮೆಯ ವಿಚಾರವೆಂದರು.
ನಮ್ಮ ಮುಂದಿನ ಪೀಳಿಗೆಯವರಲ್ಲಿ ನಮ್ಮ ತನವನ್ನು ಉಳಿಸಿ ಕಾಪಾಡುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದ್ದು, ಪೋಷಕರು ತಮ್ಮ ಮಕ್ಕಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಹೆಚ್ಚಿನ ಅರಿವು ನೀಡುವ ಕಾರ್ಯವಾಗಬೇಕೆಂದರು.
ಸುವರ್ಣ ಸಂಭ್ರಮದ ನೆನಪಿನ ಸಂಚಿಕೆ ಸುವರ್ಣ ಸಮೃದ್ಧಿ ಮತ್ತು ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿರಾಜಪೇಟೆಯ ಶಾಸಕರು ಹಾಗೂ ವಿಧಾನಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ನಂತರ ಕೊಡಗಿನ ಗೌಡ ಜನಾಂಗ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳಿಗೆ ಮತ್ತಷ್ಟು ಪುಷ್ಟಿನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನಾಂಗದ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ದೊರಕಬಹುದಾದ ಸವಲತ್ತುಗಳನ್ನು ಕೊಡಿಸಲು ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಜನಾಂಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಮಾತನಾಡಿ, ಗೌಡ ಜನಾಂಗದ ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಗೌಡ ಸಮಾಜಗಳ ಒಕ್ಕೂಟ ಬೆನ್ನೆಲುಬಾಗಿ ನಿಂತಿರುತ್ತದೆ ಎಂದು ಭರವಸೆ ನೀಡಿದರು.
ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗೌಡ ಜನಾಂಗ ಬಾಂಧವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.