ಮಡಿಕೇರಿ: ನವಪೀಳಿಗೆಗೆ ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕಿದೆ ಎಂದು ಅರೆಮಾದನಹಳ್ಳಿಯ ಶ್ರೀಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾವೇರಿ ಮಹಾ ಆರತಿ ಬಳಗ, ಕಾವೇರಿ ರಿವರ್ ಸೇವಾ ಟ್ರಸ್ಟ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ ನಡೆದ 100ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಪ್ರಕೃತಿಯ ಆರಾಧನೆ ನಿರಂತರವಾಗಿ ನಡೆಯಬೇಕು. ನದಿ, ಜಲಮೂಲಗಳನ್ನು ಸ್ವೇಚ್ಚಾಚಾರಕ್ಕೆ ಬಳಸುವಂತಾಗಬಾರದು ಎಂದ ಸ್ವಾಮೀಜಿ, ನದಿ, ಗಿಡ, ಮರ, ಪ್ರಾಣಿ ಸಂಕುಲ ಪರೋಪಕಾರಿ ಸೇವೆ ಒದಗಿಸುತ್ತಿದೆ. ಆದರೆ ಮನುಷ್ಯನ ಸ್ವಾರ್ಥ ಗುಣದಿಂದ ನದಿ, ಪರಿಸರ, ಪ್ರಾಣಿ ಸಂಕುಲ ಅವನತಿ ಹೊಂದುತ್ತಿರುವುದು ವಿಷಾದಕರ ಸಂಗತಿ. ಸಮಾಜದಲ್ಲಿ ವಿದ್ಯಾವಂತರು, ನಾಗರೀಕರು ಪ್ರಕೃತಿ ಮೇಲೆ ಉಂಟಾಗುತ್ತಿರುವ ಅನಾಚಾರದ ಬಗ್ಗೆ ಧ್ವನಿ ಎತ್ತಬೇಕಿದೆ. ಆ ಮೂಲಕ ಸುಸಂಸ್ಕೃತ, ಸಂಪದ್ಭರಿತ ಸಮಾಜ ನಿರ್ಮಾಣದ ಗುರಿ ಹೊಂದಬೇಕಿದೆ. ಪರಿಸರದ ಅಳಿವು, ಉಳಿವು ಮಾನವರ ಕೈಯಲ್ಲಿದ್ದು ನಿರಂತರ ಶ್ರದ್ದೆ, ಭಕ್ತಿ, ಸ್ಮರಣೆ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಅವರು ಕರೆ ನೀಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಅವೈಜ್ಞಾನಿಕ ಕಾರ್ಯ ಯೋಜನೆಗಳಿಂದ ಪ್ರಕೃತಿಯಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡುಬರುತ್ತಿದೆ. ಪ್ರಕೃತಿಯ ಆರಾಧನೆ ಮಾಡುವ ಮೂಲಕ ನದಿ ಪರಿಸರಗಳ ಉಳಿವು ಸಾಧ್ಯ ಎಂದರು.
ನಿರಂತರವಾಗಿ ಕಳೆದ 9 ವರ್ಷಗಳಿಂದ ಜೀವನದಿ ಕಾವೇರಿಗೆ ಮಹಾ ಆರತಿ ಬೆಳಗುವ ಮೂಲಕ ಜನರಲ್ಲಿ ನದಿ ಸಂರಕ್ಷಣೆ, ಪಾವಿತ್ರ್ಯತೆ ಬಗ್ಗೆ ಅರಿವು ಮೂಡಿಸುತ್ತಿರುವ ಬಳಗದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ನದಿ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲು ಸರಕಾರದ ಮಟ್ಟದಲ್ಲಿ ಕಾರ್ಯ ಯೋಜನೆ ರೂಪಿಸಲು ಪ್ರಸ್ತಾಪಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ನದಿ ಸ್ವಚ್ಚತೆ, ಸಂರಕ್ಷಣೆ ಬಗ್ಗೆ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಬೆಂಬಲ ಸೂಚಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್, ನದಿ ಸ್ವಚ್ಚತಾ ಆಂದೋಲನದ ಜಿಲ್ಲಾಧ್ಯಕ್ಷೆ ರೀನಾ ಪ್ರಕಾಶ್ ಮಾತನಾಡಿದರು.
ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.
ಕಾರ್ಯಕ್ರಮದಲ್ಲಿ 100 ತಿಂಗಳುಗಳ ಕಾಲ ನಿರಂತರವಾಗಿ ಆರತಿ ಪೂಜೆ ಸಲ್ಲಿಸಿದ ಅರ್ಚಕ ಕೃಷ್ಣಮೂರ್ತಿ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.