ಚಾಮರಾಜನಗರ: ಫೋನ್‍ನಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಖ್ಯಾತ ಜ್ಯೋತಿಷಿ ಹಾಗೂ ವೀರಾಂಜನೇಯ ದೇವಾಲಯದ ಅರ್ಚಕರೊಬ್ಬರನ್ನು ಬ್ಲ್ಯಾಕ್‍ಮೇಲ್ ಮಾಡಿದ ತಂಡವೊಂದು ಅರ್ಚಕರಿಂದ ಸುಮಾರು ಇಪ್ಪತ್ತು ಲಕ್ಷ ಹಣ ವಸೂಲಿ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ್ ರಾಘವನ್ ಬ್ಲ್ಯಾಕ್ ಮೇಲ್‍ಗೆ ಒಳಗಾಗಿ ಹಣ, ಒಡವೆ ಕಳೆದುಕೊಂಡವರು. ಇವರನ್ನು ಬ್ಲ್ಯಾಕ್ ಮೇಲ್ ಮಾಡಿದ ಬೆಂಗಳೂರು ಮೂಲದ ಆರೋಪಿಗಳಾದ ಸರೋಜಮ್ಮ, ಬಸವರಾಜು, ನಾಗರತ್ನಮ್ಮ ಅವರನ್ನು ಕೊಳ್ಳೇಗಾಲ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಳೆದ ಆರು ತಿಂಗಳ ಹಿಂದೆ ಪೂಜೆ ಮಾಡಿಸಲು ಕೊಳ್ಳೇಗಾಲದಲ್ಲಿರುವ ಅರ್ಚಕ ರಾಘವನ್ ಅವರ ಬಳಿ ಬಂದಿದ್ದರು. ದೇವಸ್ಥಾನದಲ್ಲಿ ಪರಿಚಯವಾದ ಈ ಮಹಿಳೆಯೊಂದಿಗೆ ಅರ್ಚಕ ರಾಘವನ್ ಫೋನ್‍ನಲ್ಲಿ ಸಂಪರ್ಕ ಇಟ್ಟುಕೊಂಡು ಅಶ್ಲೀಲವಾಗಿ ಮಾತನಾಡಿದ್ದರು ಎನ್ನಲಾಗಿದೆ.
ಆದರೆ ಅರ್ಚಕರ ಅಶ್ಲೀಲ ಸಂಭಾಷಣೆಯನ್ನು ಅಸ್ತ್ರವಾಗಿಟ್ಟುಕೊಂಡ ಆರೋಪಿಗಳು, ಅರ್ಚಕ ರಾಘವನ್‍ಗೆ ಹೆದರಿಸಿ ಕಳೆದ ಆರು ತಿಂಗಳಿಂದ ಹಣ ಕೀಳುತ್ತಿದ್ದರು ಎನ್ನಲಾಗಿದೆ. ಹಣ ನೀಡಲಿಲ್ಲ ಎಂದರೆ ಸಂಭಾಷಣೆಯನ್ನು ಮಾಧ್ಯಮಗಳಿಗೆ ಕೊಡುತ್ತೇನೆ ಎಂದು ಬೆದರಿಸಿದ್ದರು. ಇದರಿಂದ ಹೆದರಿದ ಅರ್ಚಕ ರಾಘವನ್ ಕೇಳಿದಾಗಲೆಲ್ಲಾ ಹಣ ನೀಡುತ್ತಾ ಬಂದಿದ್ದಾರೆ. ಇದುವರೆಗೆ 19 ಲಕ್ಷದ 95 ಸಾವಿರ ರೂಪಾಯಿ ಹಣ ಅಲ್ಲದೇ ಸುಮಾರು 18 ಗ್ರಾಂ ಚಿನ್ನದ ಸರವನ್ನೂ ಸಹ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಬೇಕೆಂದಾಗೆಲ್ಲ ಹಣ ನೀಡುತ್ತಿದ್ದದ್ದರಿಂದ ದುರಾಸೆಗೆ ಬಿದ್ದ ಆರೋಪಿಗಳು ದೊಡ್ಡ ಮೊತ್ತವಾಗಿ ಮತ್ತೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು ಇದರಿಂದ ಬೇಸತ್ತ ಅರ್ಚಕ ರಾಘವನ್ ಆರೋಪಿಗಳ ವಿರುದ್ದ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ನವೆಂಬರ್ 8ರಂದು ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಜೆ.ರಾಜೇಂದ್ರ, ಡಿವೈಎಸ್ಪಿ ನವೀನ್‍ಕುಮಾರ್ ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಅರ್ಚಕ ರಾಘವನ್ ಮೂಲಕ ಆರೋಪಿಗಳಿಗೆ ಮೊಬೈಲ್ ಕರೆ ಮಾಡಿಸಿ, ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಬಳಿ ಬಂದರೆ ಬೇಡಿಕೆ ಇಟ್ಟಿದ್ದ ಪೂರ್ತಿ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ. ಅದರಂತೆ ಆರೋಪಿಗಳು ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ನಂಜುಂಡಸ್ವಾಮಿ ಪ್ರತಿಮೆ ಬಳಿ ಬಂದಾಗ ಕೊಳ್ಳೇಗಾಲ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ನಡೆಸಿ ಸತ್ಯ ಬಾಯಿ ಬಿಡಿಸಿ, ಆರೋಪಿಗಳಿಂದ ಒಟ್ಟು 13 ಲಕ್ಷದ 77 ಸಾವಿರ ರೂ ನಗದು ಹಾಗೂ ಚಿನ್ನದ ಸರ ವಶಪಡಿಸಿಕೊಂಡು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.