ಚಾಮರಾಜನಗರ: ಗ್ರಾಮ ಪಂಚಾಯ್ತಿ ಉಗ್ರಾಣದಿಂದ ರಾತ್ರೋ ರಾತ್ರಿ ಯಾರಿಗೂ ತಿಳಿಯದಂತೆ ಸಿಮೆಂಟ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಘಟನೆ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು ಗ್ರಾಮ ಪಂಚಾಯಿತಿ ಉಗ್ರಾಣದಲ್ಲಿದ್ದ ಸಿಮೆಂಟ್ ಮೂಟೆಗಳ ಸಾಗಾಟಕ್ಕೆ ಯತ್ನ ಮಾಡುತ್ತಿದ್ದುದ್ದನ್ನು ಗ್ರಾಮಸ್ಥರು ಕಂಡು ಬೆರಗಾಗಿ ಕಳ್ಳ ಸಾಗಾಣಿಕೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಗುರುವಾರ ರಾತ್ರಿ ಸಮಯದಲ್ಲಿ ಟ್ರಾಕ್ಟರ್‍ಗೆ ಗ್ರಾಮ ಪಂಚಾಯಿತಿಯ ಉಗ್ರಾಣದಲ್ಲಿ ಶೇಖರಿಸಿದ್ದ ಸಿಮೆಂಟ್ ಮೂಟೆಗಳನ್ನು ಅಕ್ರಮವಾಗಿ ತುಂಬುತ್ತಿದ್ದಾಗ ಸ್ಥಳೀಯರಿಂದ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿನ ಅಭಿವೃದ್ದಿ ಕೆಲಸ ಕಾರ್ಯ ಮಾಡುತ್ತಿದ್ದ ಗುತ್ತಿಗೆದಾರ ಮತ್ತು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸೇರಿಕೊಂಡು ಸರ್ಕಾರದ ಹಣ ಸ್ವಾಹ ಮಾಡ್ತಾ ಇದ್ದಾರಾ ಎನ್ನುವ ಅನುಮಾನ ಮೂಡಿಸಿದೆ.
ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.