ಗೋಕಾಕ: ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನನ್ನ ತಲೆ ಮೇಲೆ ಕೂರಿಸಲು ಮುಂದಾದ ಕಾರಣದಿಂದಾಗಿ ಕಾಂಗ್ರೆಸ್ ಬಿಟ್ಟು ಹೊರಬಂದು ಬಿಜೆಪಿ ಸೇರಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಹಾಗೂ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಲಕ್ಷ್ಮೀ ಅವರಿಗೆ ಯಾವುದೇ ಸ್ಥಾನಮಾನ ನೀಡಬಾರದು ಎಂದು ನಿರ್ಧಾರ ಮಾಡಲಾಗಿತ್ತು. ಆದರೆ ನನ್ನನ್ನು ಕಡೆಗಣಿಸಿ, ಲಕ್ಷ್ಮೀ ಅವರಿಗೆ ಮೈಸೂರು ಮಿನರಲ್ಸ್ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಯಿತು ಎಂದರು.
ಲಕ್ಷ್ಮೀ ಅವರು ಪ್ರಭಾವಿ ಆಗಲು ನಾವು ಕಾರಣರಾಗಿದ್ದೇವೆ. ಅವರಿಗಾಗಿ ದುಡಿದವರ ಬಗ್ಗೆ ಯೋಚಿಸಬೇಕಿತ್ತು ಎಂದು ಹೇಳಿದರು.
ಕರ್ನಾಟಕದ ಕಾಂಗ್ರೆಸ್ ಡಿಕೆಶಿ ಅವರ ಕೈಯಲ್ಲಿದೆ. ಇನ್ನು ಜಾರಕಿಹೊಳಿ ಅವರಲ್ಲಿ ಏನೂ ಇಲ್ಲ ಎಂದು ನನ್ನನ್ನು ನಿರ್ಲಕ್ಷ್ಯ ಮಾಡಿದರು. ರಾಜಕಾರಣದಲ್ಲಿ ಸಣ್ಣವರು ಮತ್ತು ದೊಡ್ಡವರು ಯಾರು ಎಂದು ತಿಳಿಯುವ ಪ್ರಯತ್ನ ಮಾಡಲಿಲ್ಲ. ಕಾಂಗ್ರೆಸ್ ನಲ್ಲೇ ಇದ್ದಿದ್ದರೆ ನಿರ್ನಾಮ ಮಾಡುತ್ತಿದ್ದರು ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದರು.