ಮಡಿಕೇರಿ: ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕೇಂದ್ರಗಳ ನೋಂದಣಿ ಕಡ್ಡಾಯವಾಗಿದ್ದು, ನಿಯಮ ಮೀರುವ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಎಚ್ಚರಿಕೆ ನೀಡಿದ್ದಾರೆ.
ಡಿಹೆಚ್‍ಓ ಕಚೇರಿಯಲ್ಲಿ ನಡೆದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆಗೆ ಸಂಬಂಧಿಸಿದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 4 ಸರ್ಕಾರಿ ಮತ್ತು 22 ಖಾಸಗಿ ಕೇಂದ್ರಗಳಿವೆ.
ಖಾಸಗಿ ಕೇಂದ್ರಗಳು ಕಡ್ಡಾಯವಾಗಿ ನೋಂದಣಿ ಮಾಡಬೇಕು. ನೋಂದಣಿ ಮಾಡಿರುವ ಕೇಂದ್ರಗಳು ಕಾಲ ಕಾಲಕ್ಕೆ ನವೀಕರಣ ಮಾಡಬೇಕು. ಈ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ನವೀಕರಣ ಮಾಡದಿರುವ ಕೇಂದ್ರಗಳು ಇದ್ದಲ್ಲಿ ಮುಂದಿನ ಕ್ರಮ ವಹಿಸಬೇಕಾಗುತ್ತದೆ ಎಂದು ಡಿಎಚ್‍ಒ ಅವರು ಎಚ್ಚರಿಕೆ ನೀಡಿದರು.
ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳ ತಂಡ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.
ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಅಕ್ಟೋಬರ್ ತಿಂಗಳಲ್ಲಿ ಎರಡು ಕೇಂದ್ರಗಳಿಗೆ, ನವೆಂಬರ್ ತಿಂಗಳಲ್ಲಿ ಆರು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗೋಪಿನಾಥ್, ಸಮಿತಿ ಸದಸ್ಯರಾದ ಒಡಿಪಿ ಸಂಸ್ಥೆಯ ಲೀನಾ ಲೋಬೋ, ಆಶೋದಯ ಸಮಿತಿಯ ತುಳಸಿ ಇತರರು ಹಾಜರಿದ್ದರು.