News Kannada
Wednesday, December 07 2022

ಕರ್ನಾಟಕ

ಚಪ್ಪಂಡಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಸ್ಯೆಗಳ ಸರಮಾಲೆ

Photo Credit :

ಚಪ್ಪಂಡಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಸ್ಯೆಗಳ ಸರಮಾಲೆ

ಮಡಿಕೇರಿ: ದೇಶದ ಮುಂದಿನ  ಸತ್ಪ್ರಜೆಗಳನ್ನು ರೂಪಿಸುವ ವಿದ್ಯಾದೇಗುಲಗಳ ಅಭಿವೃದ್ಧಿಗೆ ಹಾಗೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ  ಸರಕಾರ ಹತ್ತು ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ನಡುವೆ ಮಕ್ಕಳ ಕೊರತೆಯಿಂದ ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿವೆ ಎಂಬ ಕೂಗುಗಳು ಕೇಳಿಬರುತ್ತಿವೆ. ಆದರೆ ಕೊಳಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಪ್ಪಂಡಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಪ್ಪಂಡಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು ಐವತ್ತಕ್ಕೂ ಹೆಚ್ಚಿನ ವರ್ಷಗಳಿಂದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳನ್ನು ಶಿಕ್ಷಣವಂತರನ್ನಾಗಿ ರೂಪಿಸುತ್ತಾ ಬಂದಿದೆ. 

ಶಿಕ್ಷಕರ ಕೊರತೆ- ಚಪ್ಪಂಡಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸುಮಾರು 111 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಬಹುತೇಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು 111 ವಿದ್ಯಾರ್ಥಿಗಳಿಗೆ ಕೇವಲ ಐದು ಮಂದಿ ಶಿಕ್ಷಕರಿದ್ದು, ಅದರಲ್ಲೂ ಓರ್ವ ಶಿಕ್ಷಕರು ಡೆಪ್ಟೇಶನ್‍ನಲ್ಲಿ ಬೇರೆ ಶಾಲೆಗೆ ನಿಯುಕ್ತಿಗೊಂಡಿದ್ದು, ಮತ್ತೋಬ್ಬ ಶಿಕ್ಷಕರು ನಿವೃತ್ತರಾಗಿದ್ದಾರೆ. ಉಳಿದ ಮೂವರು ಶಿಕ್ಷಕರು ಒಂದರಿಂದ ಎಂಟನೇ ತರಗತಿಯವರೆಗೆ ಪಾಠ ಪ್ರವಚನಗಳನ್ನು ಮಾಡಬೇಕಿದೆ.  ಇದರಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗೆ ಸರಿಯಾಗಿ ಆಗಮಿಸದೇ, ಮೀಟಿಂಗ್‍ಗಳಿಗೆ ತೆರಳುತ್ತಿದ್ದಾರೆಂದು ಆರೋಪಿಸಿರುವ ಗ್ರಾಮಸ್ಥರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದ್ದಾರೆ.

ರಸ್ತೆ-ಶೌಚಾಲಯ ಕೊರತೆ- ಸುಸಜ್ಜಿತ ಶಾಲಾ ಕೊಠಡಿಗಳು ಹಾಗೂ ಆಟದ ಮೈದಾನವಿದ್ದು, ಶಾಲೆಗೆ ತೆರಳಲು ಸರಿಯಾದ ರಸ್ತೆಯಾಗಲೀ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆಯಾಗಲೀ   ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಲೆಗೆ ತೆರಳುವ ರಸ್ತೆಯನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಸೇರಿ ರಸ್ತೆಗೆ ಮಣ್ಣು ಸುರಿದು ಮಕ್ಕಳು ತಿರುಗಾಡಲು ಅನುಕೂಲ ಕಲ್ಪಿಸಿದ್ದಾರೆ. ಸ್ವಚ್ಛತಾ ಅಭಿಯಾನದ ಕೂಗು ಎಲ್ಲೆಡೆ ಕೇಳಿಬರುತ್ತಿದೆಯಾದರೂ ಈ ಶಾಲೆಗೆ ಮಾತ್ರ ಅನ್ವಯಿಸುತ್ತಿಲ್ಲ ಎಂದರೂ ಅತಿಶಯೋಕ್ತಿಯಲ್ಲ ಏಕೆಂದರೆ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಬಯಲನ್ನೇ ಆಶ್ರಯಿಸಬೇಕಿದೆ. ವಿದ್ಯಾರ್ಥಿಗಳಿಗೆ ಶಾಲಾಭಿವೃದ್ದಿ ಸಮಿತಿಯವರು ನೀರನ್ನು ಡ್ರಮ್‍ನಲ್ಲಿ ನೀರನ್ನು ತುಂಬಿಸಿ ಇಡುವಂತಹ ಪರಿಸ್ಥಿತಿ ಇದೆ. ಸರಕಾರಿ ಶಾಲೆಗೆ ಸರಕಾರದಿಂದ ಯಾವುದೇ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ದಿಗೆ ತೊಡಕಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಒಟ್ಟಿನಲ್ಲಿ ಚಪ್ಪಂಡಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪಾಠಪ್ರವಚನಗಳಿಗೆ ತೊಂದರೆಯಾಗುತ್ತಿದ್ದು, ಆದ್ದರಿಂದ  ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಹಾಗೂ ಈಗಿರುವ ಶಾಲಾ ಮುಖ್ಯೋಪಾಧ್ಯಾಯರನ್ನು ವರ್ಗಾವಣೆ ಮಾಡಿ ಬೇರೆಯವರನ್ನು ನೇಮಿಸುವಂತೆ ಶಾಲಾಭಿವೃದ್ದಿ ಸಮಿತಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದು, ತಪ್ಪಿದ್ದಲ್ಲಿ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದ್ದಾರೆ.

See also  ಈರುಳ್ಳಿ ಚಿತ್ರಾನ್ನದ ರುಚಿ ನೋಡಿದ್ದೀರಾ?

ಶಾಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳೇ ಹೆಚ್ಚಾಗಿದ್ದು, ಶಾಲೆ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ ಅಲ್ಲದೇ, ಶಾಲೆಗೆ ತೆರಳಲು ಸರಿಯಾದ ರಸ್ತೆಯಾಗಲೀ ಮತ್ತು ಶೌಚಾಲಯ ವ್ಯವಸ್ಥೆಯಾಗಲೀ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಅಲ್ಲದೇ ಶಾಲೆಯ ಅಭಿವೃದ್ದಿಗೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಇದರಿಂದಾಗಿ ಶಾಲೆ ಮುಚ್ಚುವ ಹಂತ ತಲುಪಿದರೂ ಅಚ್ಚರಿ ಪಡುವಂತಿಲ್ಲ. ಕೂಡಲೇ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು ಹಾಗೂ ರಸ್ತೆ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು. ತಪ್ಪಿದ್ದಲ್ಲಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಕೆ.ವೈ.ಅಶ್ರಫ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷರು.

ಕಳೆದ ಹದಿನಾರು ವರ್ಷಗಳಿಂದ ಶಾಲಾಭಿವೃದ್ದಿ ಸಮಿತಿಯಲ್ಲಿ ಶಿಕ್ಷಣ ತಜ್ಞನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಶೈಕ್ಷಣಿಕ ಬದುಕಿಗೆ ತೊಂದರೆಯಾಗುತ್ತಿದೆ. ಶಾಲೆಯ ಮುಖ್ಯೋಪಾಧ್ಯಾಯರು ಯಾವಾಗ ನೋಡಿದರೂ ಮೀಟಿಂಗ್ ಇದೆ ಎಂದು ಶಾಲೆಗೆ ಸರಿಯಾಗಿ ಬರುತ್ತಿಲ್ಲ ಈ  ಹಿನ್ನೆಲೆಯಲ್ಲಿ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದ್ದು, ಈಗಿರುವ ಮುಖ್ಯೋಪಾಧ್ಯಾಯರನ್ನು ಬದಲಿಸಿ ಬೇರೊಬ್ಬರನ್ನು ನಿಯೋಜಿಸಬೇಕಿದೆ.

ಟಿ.ಎ.ಮೊಹಮ್ಮದ್. ಶಿಕ್ಷಣ ತಜ್ಞ.

ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಸಾಧನೆಗೂ ಅಡ್ಡಿಯುಂಟಾಗುತ್ತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಹಿನ್ನಡೆಯಾಗುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಶಾಲೆಗೆ ಶಿಕ್ಷಕರನ್ನು ನೇಮಿಸುವುದರ ಜೊತೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಬೇಕು.

ಷಂಶುದ್ದೀನ್. ಪೋಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು