ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸಮುದಾಯ ಹರಡುವಿಕೆ ಭಯ ಪಡುವ ಅಗತ್ಯ ಇಲ್ಲ. ಎರಡನೇ ಹಂತದಲ್ಲಿ 70 ಮತ್ತು ಮೂರನೇ ಹಂತದಲ್ಲಿ 11ಮಂದಿಗೆ ಮಾತ್ರ ಸಂಪರ್ಕದಿಂದ ಸೋಂಕು ತಗಲಿದೆ. ಇದರಿಂದ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 443 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಒಂದೂ ಒಂದೂ ಸಾವು ಸಂಭವಿಸಿಲ್ಲ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಾಧನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಫೆಬ್ರವರಿಯಲ್ಲಿ ಕಾಸರಗೋಡಿನಲ್ಲಿ ಮೊದಲ ಸೋಂಕು ದೃಢಪಟ್ಟಿತ್ತು. ಭಾರತದಲ್ಲೇ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿತ್ತು. ಬಳಿಕ 39 ದಿನಗಳ ಬಳಿಕ ಮಾರ್ಚ್ 14 ರಂದು ಎರಡನೇ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಮಾರ್ಚ್ 17 ರಂದು ಮೂರನೇ ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಾ ಸಾಗಿತ್ತು. ಜಿಲ್ಲೆಯಲ್ಲಿ ಫೆಬ್ರವರಿ ಮೂರರಂದು ಚೀನಾದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಮೊದಲ ಕೊರೋನಾ ದೃಢಪಟ್ಟಿತ್ತು. ಮಾರ್ಚ್ 14ರಿಂದ ಮೇ ಒಂದರ ತನಕದ ಅವಧಿಯಲ್ಲಿ 178 ಮಂದಿಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ 108 ಪ್ರಕರಣಗಳು ವಿದೇಶದಿಂದ ಹಾಗೂ 70 ಸಂಪರ್ಕದಿಂದ ಬಂದವುಗಳಾಗಿವೆ.
ಜಿಲ್ಲೆಯಲ್ಲಿ ಕಳೆದ 35 ದಿನ ಗಳಿಂದ ಸಂಪರ್ಕದಿಂದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಇದರಿಂದ ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆಯ ಭಯ ಇಲ್ಲ. ಆದರೂ ಜನರು ಸಾಮಾಜಿಕ ಅಂತರ ಪಾಲಿಸಿ , ಮಾಸ್ಕ್ ಧರಿಸಿ , ಸ್ವಚ್ಛತೆ ಕಾಪಾಡಿ ಆರೋಗ್ಯ ಇಲಾಖೆಯ
ಮಾನದಂಡಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ