ಮಡಿಕೇರಿ: ಭ್ರಷ್ಟ ವ್ಯವಸ್ಥೆಯಲ್ಲಿ ರಾಜ್ಯ ನಲುಗುತ್ತಿದ್ದು, ಜನಸಾಮಾನ್ಯರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ರಾಜ್ಯವನ್ನು ಅಭ್ಯುದಯದೆಡೆಗೆ ಕೊಂಡೊಯ್ಯಲು ‘ಚಲಿಸು ಕರ್ನಾಟಕ’ ಘೋಷ ವಾಕ್ಯದೊಂದಿಗೆ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರೈತ ಘಟಕದ ರಾಜ್ಯಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಅವರು ರಾಜ್ಯಾದ್ಯಂತ 2700 ಕಿ.ಮೀ. ಸಂಚರಿಸುವ ಸೈಕಲ್ ಯಾತ್ರೆ ಸೆ.14 ರಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕೋವಿಡ್ ಮುಖವಾಡದ ಹಿಂದೆ ಭ್ರಷ್ಟಾಚಾರ ಮಿತಿ ಮೀರಿದ್ದು, ಸೋಂಕು ನಿಯಂತ್ರಣದ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಕೇವಲ ಅಧಿಕಾರ ಮತ್ತು ಹಣ ಮಾಡುವುದಕ್ಕಷ್ಟೇ ಸೀಮಿತವಾಗಿ ಆಡಳಿತ ವ್ಯವಸ್ಥೆ ನಡೆಯುತ್ತಿದೆ ಎಂದು ಆರೋಪಿಸಿದರು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಉದ್ಯಮಗಳು, ವ್ಯಾಪಾರ ವಹಿವಾಟುಗಳು ನೆಲ ಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಭಯವಾದ ಭ್ರಷ್ಟಾಚಾರ ಮುಕ್ತ ಸಮಾಜವನ್ನು ಕಟ್ಟುವ ಅಗತ್ಯವಿದೆ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಷ್ಟ್ರಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಸೆ.14 ರಂದು ಕೋಲಾರದಲ್ಲಿ ಮೊದಲ ಹಂತದ “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ ಆರಂಭಗೊಳ್ಳಲಿದೆ. ಈ ಯಾತ್ರೆ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು, ರಾಮನಗರ, ಮಂಡ್ಯ ಜಿಲ್ಲೆಗಳನ್ನು ಹಾದು ಸೆ.19 ರಂದು ಟಿ. ನರಸೀಪುರ, ಸೆ.21 ರಂದು ಪಿರಿಯಾಪಟ್ಟಣದ ಮೂಲಕ ಸೆ.24 ರಂದು ಕೊಡಗನ್ನು ಪ್ರದೇಶಿಸಲಿದೆ. ನಂತರ ಸೋಮವಾರಪೇಟೆ, ಶನಿವಾರಸಂತೆಯ ಮೂಲಕ ಹಾಸನ ಜಿಲ್ಲೆಯ ಅರಕಲಗೂಡಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.