News Kannada
Monday, September 26 2022

ಕರ್ನಾಟಕ

ಮಡಿಕೇರಿಯಲ್ಲಿ ಎಂದೂ ನಿಲ್ಲದ ದಸರಾ ಕರಗ - 1 min read

Photo Credit :

ಮಡಿಕೇರಿಯಲ್ಲಿ ಎಂದೂ ನಿಲ್ಲದ ದಸರಾ ಕರಗ

ಮಡಿಕೇರಿ: ಐತಿಹಾಸಿಕ ಬೆಳಕಿನ ದಸರಾ ಎಂದೇ ಕರೆಯುವ ಮಡಿಕೇರಿ ದಸರಾಕ್ಕೆ ದಿನಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಮೈಸೂರು ದಸರಾವನ್ನು ಹೊರತುಪಡಿಸಿದರೆ ಹೆಚ್ಚು ಆಕರ್ಷಿಸುವ ಮತ್ತೊಂದು ದಸರಾ ಎಂದರೆ ಅದು ಮಡಿಕೇರಿಯ ದಸರಾ.. ಹೀಗಾಗಿಯೇ ಮೈಸೂರು ದಸರಾವನ್ನು ಸ್ವಾಗತಿಸಿದರೆ ಮಡಿಕೇರಿ ಬೀಳ್ಕೊಡುತ್ತದೆ ಎಂಬ ಮಾತಿದೆ.

ಸಾಮಾನ್ಯವಾಗಿ ಮೈಸೂರಿನಲ್ಲಿ ಹಗಲು ಹೊತ್ತಿನಲ್ಲಿ ದಸರಾ ನಡೆಯುವುದರಿಂದ ಅದನ್ನು ಮುಗಿಸಿಕೊಂಡು ರಾತ್ರಿಗೆ ಮಡಿಕೇರಿಗೆ ಜನ ತೆರಳುತ್ತಿದ್ದರು. ಆದರೆ ಈ ಬಾರಿ ದಸರಾ ಆಚರಣೆಗೆ ಬನ್ನಿ ಎನ್ನುವುದಕ್ಕಿಂತಲೂ ಬರಬೇಡಿ ಎಂದು ಮನವಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ದುರಂತ. ಹಾಗೆನೋಡಿದರೆ ಕೊಡಗಿನ ಇತಿಹಾಸದಲ್ಲಿ ಮಡಿಕೇರಿಯಲ್ಲಿ ದಸರಾ ಆಚರಣೆ ನಡೆಸಲು ಕಾರಣವೂ ಇದೆ. ಅವತ್ತು ಮಡಿಕೇರಿಯಲ್ಲಿ ಕಾಣಿಸಿಕೊಂಡಿದ್ದ ಸಾಂಕ್ರಾಮಿಕ ರೋಗವನ್ನು ತಡೆಯಲು ದಸರಾ ಆಚರಣೆ ಜಾರಿಗೆ ತಂದಿದ್ದರೆ ಇವತ್ತು ಕೊರೋನಾದಂತಹ ರೋಗದಿಂದಲೇ ದಸರಾವನ್ನು ಸರಳವಾಗಿ ಆಚರಿಸುವಂತಾಗಿರುವುದು ಬೇಸರದ ಸಂಗತಿಯಾಗಿದೆ.

ಮಡಿಕೇರಿ ದಸರಾದಲ್ಲಿ ಶಕ್ತಿದೇವತೆಗೆ ಆದ್ಯತೆ. ಅದಕ್ಕೆ ಮೊದಲ ಪೂಜೆಯೂ ಹೌದು. ಅಷ್ಟೇ ಅಲ್ಲ ಮಡಿಕೇರಿ ದಸರಾದ ಈ ದೇವತೆಗಳೇ ದಸರಾದ ಸೂತ್ರಧಾರಿಗಳು ಕೂಡ. ಮಡಿಕೇರಿ ದಸರಾವನ್ನು ನೋಡಿದವರಿಗೆ ಅದ್ಧೂರಿಯ ವಿದ್ಯುದ್ದೀಪಗಳಿಂದ ಮಿನುಗುವ ಮತ್ತು ದೇವಾನುದೇವತೆಗಳಿಂದ ಅಸುರರ ಸಂಹಾರದ ಕಲಾಕೃತಿಗಳನ್ನೊಳಗೊಂಡ ಭವ್ಯ ಮಂಟಪಗಳು ಸೆಳೆಯುತ್ತವೆ. ಆದರೆ ಅದರ ಹಿಂದಿನ ಶಕ್ತಿದೇವತೆಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ರಾಜರ ಕಾಲದಲ್ಲಿ ಮಡಿಕೇರಿ ಕೋಟೆಯ ರಕ್ಷಣೆಗಾಗಿ ನಾಲ್ಕು ಶಕ್ತಿದೇವತೆಗಳಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯಗಳನ್ನು ಪ್ರತಿಷ್ಠಾಪಿಸಲಾಗಿದ್ದು ಈ ನಾಲ್ಕು ಶಕ್ತಿದೇವತೆಗಳ ಕರಗಗಳೇ ಮಡಿಕೇರಿ ದಸರಾದ ರೂವಾರಿಗಳಾಗಿವೆ.

ಸುಮಾರು 190 ವರ್ಷಗಳ ಹಿಂದೆ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತಂತೆ. ಆ ಸಂದರ್ಭ ರೋಗ ಹರಡಲು ಕಾರಣ ಹುಡುಕಿಕೊಂಡು ಧಾರ್ಮಿಕ ಮುಖಂಡರು ದೇವರ ಮೊರೆ ಹೋದರು. ಆಗ ಮಹಾಮಾರಿ ರೋಗಕ್ಕೆ ದುಷ್ಟ ಶಕ್ತಿಗಳು ಕಾರಣವಾಗಿದ್ದು, ಅದಕ್ಕೆ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಿದರೆ ನಗರದಲ್ಲಿ ತಲೆದೋರಿರುವ ಸಾಂಕ್ರಾಮಿಕ ರೋಗ ನಿವಾರಣೆಯಾವುದಾಗಿ ತಿಳಿದು ಬಂತಂತೆ. ಅದರಂತೆ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಹೊರಡಿಸಿ ಪೂಜೆ ಸಲ್ಲಿಸುವ ಕಾರ್ಯ ಆರಂಭಿಸಲಾಯಿತು.

ಇನ್ನು ಕರಗದ ಕುರಿತಂತೆ ಪೌರಾಣಿಕ ಹಿನ್ನಲೆಯನ್ನು ನೋಡುವುದಾದರೆ ಪೌರಾಣಿಕ ಯುಗದಲ್ಲಿ ಪಾರ್ವತಿಯು ದುಷ್ಟ ರಾಕ್ಷಸರ ಸಂಹಾರಕ್ಕೆ ಹೊರಡುವ ಮುನ್ನ ಅಣ್ಣ ಮಹಾವಿಷ್ಣುವಿನ ಬಳಿಗೆ ತೆರಳಿದಳಂತೆ ಆಗ ವಿಷ್ಣು ತನ್ನ ಅಸ್ತ್ರಗಳಾದ ಶಂಕ, ಚಕ್ರ, ಗಧೆ, ಪದ್ಮ ಸೇರಿದಂತೆ ಆಯುಧಗಳನ್ನು ಆಕೆಗೆ ದಯಪಾಲಿಸಿದನಂತೆ. ಆ ನಂತರ ಪಾರ್ವತಿ ವಿವಿಧ ದೇವಿಯರ ಅವತಾರಗಳಲ್ಲಿ ತೆರಳಿ ದುಷ್ಟ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿಯೇ ಪಾರ್ವತಿ ಅವತಾರದ ನಾಲ್ಕು ಶಕ್ತಿದೇವತೆಗಳು ಊರೊಳಗೆ ಅಂದರೆ ಮಹಾವಿಷ್ಣುವಿನ ಸ್ಥಾನಕ್ಕೆ ಬರುವ ಸಂಪ್ರದಾಯ ಜಾರಿಗೆ ಬಂತು ಎನ್ನಲಾಗಿದೆ.

See also  ಕೇರಳ ರಾಜ್ಯ ಮಟ್ಟದ ಕಲೋತ್ಸವಕ್ಕೆ ಅದ್ಧೂರಿ ಚಾಲನೆ

ಹೀಗಾಗಿ ದಸರಾ ಆಚರಣೆಯ ಆ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣುವಿನ ದೇವಾಲಯ ಇಲ್ಲದೆ ಇದ್ದುದರಿಂದಾಗಿ ನಗರದ ದೊಡ್ಡಪೇಟೆಯಲ್ಲಿ ಪೂಜಾ ಮಂದಿರವನ್ನು ನಿರ್ಮಿಸಿ ಅಲ್ಲಿ ರಾಮನ ಚಿತ್ರಪಟವನ್ನಿರಿಸಿ ಪೂಜಿಸಲಾಯಿತು. ಹಾಗೂ ನವರಾತ್ರಿ ಮೊದಲ ದಿನ ಮಡಿಕೇರಿಯ ಪಂಪಿನಕೆರೆ ಬಳಿ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊರಟ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ಕರಗಗಳು ದೊಡ್ಡಪೇಟೆಯ ಶ್ರೀರಾಮಮಂದಿರಕ್ಕೆ ತೆರಳಿ ಅಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ನಂತರ ನಗರ ಪ್ರದಕ್ಷಿಣೆ ಹೊರಡುವ ಧಾರ್ಮಿಕ ಸಂಪ್ರದಾಯವನ್ನು ರೂಢಿಗೆ ತರಲಾಯಿತು.

ಇಲ್ಲಿನ ಕರಗೋತ್ಸವದ ವಿಶೇಷವೆಂದರೆ 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಎಲ್ಲ್ಲ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ಪಲ್ಲಕ್ಕಿಗಳು ಮತ್ತು ಕರಗೋತ್ಸವ ಮಾತ್ರ ನಿಲ್ಲಲಿಲ್ಲ. 1962 ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲೂ ಕರಗಗಳನ್ನು ಹೊರಡಿಸುವುದನ್ನು ಸ್ಥಗಿತಗೊಳಿಸಲಿಲ್ಲ. ಅಂದಿನಿಂದ ಇಂದಿನವರೆಗೂ ಕರಗೋತ್ಸವ ನಿರಂತರವಾಗಿ ನಡೆಯುತ್ತದೆ.

ದಸರಾ ದಿನದಂದು ನಡೆಯುವ ಮೆರವಣಿಗೆಯಲ್ಲಿಯೂ ಕರಗಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ತಮ್ಮದೇ ಆದ ಧಾರ್ಮಿಕ ವಿಧಿ ವಿಧಾನಗಳೂ ರೂಢಿಯಲ್ಲಿದೆ. ಅದೇನೆಂದರೆ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಯಾವ ಮಂಟಪವಾಗಲೀ ಇತರ ಕರಗಗಳಾಗಲೀ ಮೆರವಣಿಗೆಗೆ ಬರುವಂತಿಲ್ಲ. ಎಲ್ಲಾ ಕರಗಗಳೂ, ಮಂಟಪಗಳೂ ದಂಡಿನಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರ ಮೆರವಣಿಗೆಯಲ್ಲಿ ತೆರಳಿ ನಗರದ ಗದ್ದಿಗೆ ಬಳಿ ಬನ್ನಿ ಕಡಿಯಬೇಕೆಂಬ ನಿಯಮವಿರುವುದನ್ನು ನಾವು ಕಾಣಬಹುದಾಗಿದೆ.

ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದಸರಾವನ್ನು ಸರಳವಾಗಿ ನಡೆಸಲಾಗುತ್ತಿದ್ದು, ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ನೋಡಿ ಜನ ಸಂದಣಿ ಸೇರದಂತೆ ಸೂಚಿಸಲಾಗಿದೆ. ಶಕ್ತಿದೇವತೆಗಳು ಹೊರಡುವ ಈ ದಿನ ಕೊರೋನಾದಂತಹ ಮಹಾಮಾರಿ ದೇಶವನ್ನು ತೊರೆಯುವಂತಾಗಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು