ಮಂಡ್ಯ: 18ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಜನವರಿ 29,30 ಹಾಗೂ 31 ರಂದು ಅಥವಾ ಫೆಬ್ರವರಿ ಮೊದಲ ವಾರದ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಆದ ಡಾ. ಕೆ.ಸಿ. ನಾರಾಯಣಗೌಡರ ನೇತೃತ್ವದಲ್ಲಿ ಮಂಡ್ಯ ನಗರದ ಅಥವಾ ಕೆ.ಆರ್.ಪೇಟೆಯ ಪಟ್ಟಣದಲ್ಲಿ ನಡೆಸುವುದು ಸೂಕ್ತ ಎಂದು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.
ನಗರದ ಬಂದಿಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯ ಕುವೆಂಪು ಭವನದಲ್ಲಿ ಜಿಲ್ಲಾ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಅಧ್ಯಕ್ಷತೆಯಲ್ಲಿ ನಡೆದ 18ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-2021ರ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಸಾಹಿತಿಗಳು, ಸದಸ್ಯರು ಪಾಲ್ಗೊಂಡು ವಿವಿಧ ಗೋಷ್ಠಿ, ಕಾರ್ಯಕ್ರಮ ಆಯೋಜನೆಗಳ ಬಗ್ಗೆ ಚರ್ಚಿಸಿ ಹಲವು ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಜಿ.ಟಿ. ವೀರಪ್ಪ ಅವರು, ಕೋವಿಡ್-19ರ ದಿನಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದು ಸವಾಲಿನ ಕಾರ್ಯವಾಗಿದೆ, ಕೋವಿಡ್-19ರ ನಿಯಮಗಳ ಪಾಲನೆಯೊಂದಿಗೆ ಸಾಹಿತ್ಯ ಸಮ್ಮೇಳನ ಆಚರಿಸುವುದು ಸೂಕ್ತವಾಗಿದೆ, ವಿವಿಧ ಗೋಷ್ಠಿಗಳು ಒಂದು ಗಂಟೆ ಮೀರದಂತೆ ಆಯೋಜಿಸಿ, ಹೊಸತನಕ್ಕೆ ಹೆಚ್ಚು ಆಧ್ಯತೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.
ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ ಮಾತನಾಡಿ, ಸಾಧ್ಯವಾದಷ್ಟು ಸ್ಥಳೀಯ ಸಾಹಿತಿಗಳು, ಕವಿಗಳು, ಹೊಸಕವಿಗಳು, ಕಲಾವಿದರು, ಜಾನಪದ ಗಾಯಕರಿಗೆ ಹೆಚ್ಚಿನ ಆಧ್ಯತೆ ನೀಡುವುದು, ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು, ಸಂಘಸಂಸ್ಥೆಗಳ ಅಧ್ಯಕ್ಷರನ್ನು ಒಂದು ವೇದಿಕೆ ಆಹ್ವಾನಿಸಿ, ಅವರೆಲ್ಲರ ಒಪ್ಪಿಗೆ ಮೇರೆಗೆ ಸುಂದರ ಸಮ್ಮೇಳನ ಆಯೋಜಿಸಿಲು ತೀರ್ಮಾನಿಸಲಾಯಿತು.
ಜಿಲ್ಲೆಯ ಎಲ್ಲ ಸಾರ್ವಜನಿಕರ ಸಹಕಾರವನ್ನು ಹೃತ್ಪೂರ್ವಕವಾಗಿ ನಿರೀಕ್ಷಿಸಲಾಗುತ್ತದೆ, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ಸಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಡಾ. ಕೃಷ್ಣೇಗೌಡ, ಡಾ.ಶಿವರಾಮ್, ಕೊತ್ತತ್ತಿರಾಜು, ಅಪ್ಪಾಜಪ್ಪ, ತುಳಸೀಧರ್, ಉಮೇಶ್, ಸಿ ಕೆ,ರಾಜನ್ನ, ಮಾಜಿ ಅಧ್ಯಕ್ಷ ಧರಣೇಂದ್ರಯ್ಯ, ಧನಂಜಯ ಮತ್ತಿತರರಿದ್ದರು.