ಶಿವಮೊಗ್ಗ: ಪಟ್ಟಣದಲ್ಲಿ ಶನಿವಾರ ರಾತ್ರಿ ಬಾಲಕಿ ಮೇಲೆ ಗ್ಯಾಂಪ್ ರೇಪ್ ನಡೆದಿದೆ.
ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ (ಸಿಮ್ಸ್)ನಲ್ಲಿದ್ದ ಬಾಲಕಿಗೆ ಊಟ ಕೊಡಿಸುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದ ವಾರ್ಡ್ ಬಾಯ್ ಮತ್ತು ಆತನ ಮೂವರು ಸ್ನೇಹಿತರು, ಕಾರಿನಲ್ಲೇ ಅತ್ಯಾಚಾರ ಎಸಗಿದ್ದಾರೆ.
ಕೋವಿಡ್-19 ಪೀಡಿತ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಒಂದು ತಿಂಗಳಿಂದ ಬಾಲಕಿಯು ಆಸ್ಪತ್ರೆಯಲ್ಲಿದ್ದಳು. ವಾರ್ಡ್ ಬಾಯ್ ಮನೋಜ್ ಪರಿಚಯವಾಗಿದ್ದರಿಂದ ಆತ ಹೋಟೆಲ್ನಿಂದ ಊಟ, ಉಪಹಾರ ತಂದುಕೊಡುತ್ತಿದ್ದ. ಕೋಮು ಗಲಭೆಯಿಂದಾಗಿ ಶಿವಮೊಗ್ಗ ನಗರ ಮೂರು ದಿನದಿಂದ ಸಂಪೂರ್ಣ ಬಂದ್ ಆಗಿದ್ದರಿಂದ ಶನಿವಾರ ರಾತ್ರಿ ಹೊರಗೆ ಊಟಕ್ಕೆ ಕಾರಿನಲ್ಲಿ ಕರೆದೊಯ್ಯುವುದಾಗಿ ಹೇಳಿದ್ದ.
ಆತನನ್ನು ನಂಬಿದ ಬಾಲಕಿಯು ಕಾರಿನಲ್ಲಿ ಹೊರಟಿದ್ದಳು. ಆದರೆ, ಕಾರಿನಲ್ಲಿ ಮನೋಜ್ ಅಲ್ಲದೆ, ಪ್ರಜ್ವಲ್, ವಿನಯ್ ಅಲ್ಲದೆ ಮತ್ತೊಬ್ಬ ಇದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಮನೋಜ್ ಅತ್ಯಾಚಾರ ಎಸಗಿದ. ಅದಾದ ಬಳಿಕ ಆತನ ಮೂವರು ಸ್ನೇಹಿತರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ.
ಇದರಿಂದ ಬಾಲಕಿ ಮಾನಸಿಕ ಆಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಬಂದು ತನ್ನ ತಾಯಿಗೆ ಸುದ್ದಿ ತಿಳಿಸಿದ್ದು, ಅದಾದ ಬಳಿಕ ಆಸ್ಪತ್ರೆಯಲ್ಲಿರುವ ಸಖಿ ಕೇಂದ್ರದ ಸಿಬ್ಬಂದಿಗೆ ವಿಷಯ ಗೊತ್ತಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಮನೋಜ್ನನ್ನು ಬಂಧಿಸಿದ್ದು ಉಳಿದ ಮೂವರಿಗೆ ಬಲೆ ಬೀಸಿದ್ದಾರೆ.
ಮನೋಜ್ ಮತ್ತು ಸ್ನೇಹಿತರು ಹಲವು ದಿನಗಳಿಂದ ಇದಕ್ಕಾಗಿ ಯೋಜನೆ ರೂಪಿಸಿದ್ದರೆಂದು ಹೇಳಲಾಗುತ್ತಿದೆ. ಬಾಲಕಿಯನ್ನು ಊಟಕ್ಕೆ ಕರೆದೊಯ್ಯವ ಉದ್ದೇಶದಿಂದಲೇ ಒಂದು ಗಂಟೆ ಮೊದಲೇ ಆಸ್ಪತ್ರೆ ಆವರಣದಲ್ಲಿ ಕಾರನ್ನು ತಂದು ನಿಲ್ಲಿಸಿಕೊಂಡಿದ್ದರೆಂದು ತಿಳಿದುಬಂದಿದೆ.