ಕಾರವಾರ: ಗೋಯರ್ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ಮಹಿಳೆಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಎರಡೇ ದಿನದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡೇಟಿನಿಂದ ತೀವ್ರ ಗಾಯಗೊಂಡ ಮಹಿಳೆ ರಸಿಕಾ ದೇಸಾಯಿಯ ಪತಿಯೇ ರಮೇಶ ದೇಸಾಯಿ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತನಿಖೆಯಿಂದ ಪತ್ತೆಯಾಗಿದೆ. ಪತ್ನಿಯ ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದ್ದು ಸದ್ಯ ಆರೋಪಿ ರಮೇಶ ದೇಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಗೋಯರ್ ಅರಣ್ಯ ಪ್ರದೇಶದಲ್ಲಿ ಒಣ ಕಟ್ಟಿಗೆ ಸಂಗ್ರಹಿಸಲು ರಸಿಕಾ ಹಾಗೂ ಪತಿ ರಮೇಶ ದೇಸಾಯಿ ತೆರಳಿದ್ದರು. ಸಂದರ್ಭದಲ್ಲಿ ರಸಿಕಾ ಅವರ ಮೇಲೆ ಗುಂಡಿ ದಾಳಿ ನಡೆದ ತೀವ್ರ ಗಾಯಗೊಂಡಿದ್ದರು. ಈ ಪ್ರಕರಣ ತನಿಖೆ ನಡೆಸಿದ ಕದ್ರಾದ ಪ್ರಭಾರ ಪಿಎಸ್ಐ ರಾಜಶೇಖರ ಸಾಗನೂರು ಅವರು ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯರ ವಿಚಾರಣೆ ನಡೆಸಿದ್ದಾಗ, ರಸಿಕಾ ಪತಿಯೇ ಈ ಕೃತ್ಯ ನಡೆಸಿರುವುದಾಗಿ ಸಂಶಯ ವ್ಯಕ್ತಪಡಿಸಿದರು.
ಈ ಬಗ್ಗೆ ರಮೇಶ ದೇಸಾಯಿಯ ತೀವ್ರ ವಿಚಾರಣೆ ನಡೆಸಿದ್ದಾಗ ತಾನೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ತಪ್ಪಿತಸ್ಥ ರಮೇಶ ದೇಸಾಯಿ, ತನ್ನ ಪತ್ನಿ ರಸಿಕಾ ಅವರ ಮೇಲೆ ಸಂಶಯ ಪಟ್ಟಿದ್ದ. ಈ ವಿಷಯಕ್ಕೆ ಸಾಕಷ್ಟು ಸಲ ಗಲಾಟೆ ಸಹ ನಡೆದಿದೆ. ಇದರಿಂದ ಕೋಪಗೊಂಡ ರಮೇಶ ದೇಸಾಯಿ ನಾಡ ಬಂದೂಕಿನಿಂದ ಹೆಂಡತಿಯ ಮೇಲೆ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
ಕದ್ರಾ ಪೊಲೀಸರು ತಪ್ಪಿತಸ್ಥ ರಮೇಶ ದೇಸಾಯಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ್ದ ನಾಡ ಬಂದೂರು ಹಾಗೂ ಗುಂಡು ಸೇರಿದಂತೆ ಇನ್ನಿತರ ಪರಿಕರವನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಕದ್ರಾ ಪ್ರಭಾರ ಪಿಎಸ್ಐ ರಾಜಶೇಖರ ಸಾಗನೂರು, ಚಿತ್ತಾಕುಲಾ ಅಪರಾಧ ವಿಭಾಗದ ಪಿಎಸ್ಐ ಎಂ. ಜಿ. ಕುಂಬಾರ, ಮಲ್ಲಾಪುರ ಠಾಣೆ ಎಎಸ್ಐ ವೆಂಕಟೇಶ ಹರಿಕಂತ್ರ, ಎಸ್ಸಿಗಳಾದ ವೆಂಕಟೇಶ ಸುಬ್ರಮಣ್ಣ, ಪಿಸಿ ನಿಂಗಪ್ಪ, ಶೃತಿ ಪೂಜಾರಿ, ಕದ್ರಾ ಠಾಣೆಯ ಎಎಸ್ಐ ಕೃಷ್ಣಾನಂದ ನಾಯ್ಕ, ಎಚ್ಸಿ ಗೋಪಾಲ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.