ಮಡಿಕೇರಿ: ರಾಜ್ಯದ ಪುಟ್ಟ ಪ್ರವಾಸೀ ಜಿಲ್ಲೆ ಕೊಡಗು ಕಳೆದ ಮೂರು ವರ್ಷಗಳಿಂದ ಭೀಕರ ಭೂ ಕುಸಿತ ಮತ್ತು ಮಳೆಗೆ ಸಿಲುಕಿ ನಲುಗಿ ಹೋಗಿದೆ. ಈ ಮೂರು ವರ್ಷಗಳಲ್ಲಿ ಸಾವಿರಾರು ಜನರು ಮನೆ, ಕೃಷಿ ಭುಮಿ ಕಳೆದುಕೊಂಡು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಸಂತ್ರಸ್ಥರಾಗಿದ್ದಾರೆ. ಮಳೆಗಾಲದಲ್ಲಿ ಗುಡ್ಡ, ಬೆಟ್ಟ ಕುಸಿತ ಎಂಬುದು ಕಳೆದ ನೂರಾರು ವರ್ಷಗಳಲ್ಲಿ ಇರಲೇ ಇಲ್ಲ. ಆದರೆ ಯಾವಾಗ ಕೊಡಗಿನಲ್ಲಿ ಲಂಗು ಲಗಾಮಿಲ್ಲದೆ ಹೋಂ ಸ್ಟೇ ಗಳು ಆರಂಬಗೊಂಡವೋ ಆಗ ಹಚ್ಚ ಹಸಿರಿನ ಹೊದಿಕೆ ಹೊದ್ದಿದ್ದ ಗುಡ್ಡಗಳನ್ನೆಲ್ಲ ಅವೈಜ್ಞಾನಿಕ ಕಾಮಗಾರಿ ಮಾಡಿ ಸಮತಟ್ಟು ಮಾಡಲಾಯಿತು. ಇದರಿಂದಾಗಿ ಭುಮಿಯೊಳಗೆ ನೀರು ಹೋಗಲು ಆಸ್ಪದವಾಯಿತು. ಪರಿಣಾಮ ಬೆಟ್ಟ ಗುಡ್ಡಗಳ ಕುಸಿತವೂ ಸಂಭವಿಸಿದೆ.
ಬೆಟ್ಟದ ಮೇಲಿನ ಬಿರುಕುಗಳು, ಅರಣ್ಯ ಇಲಾಖೆಯ ಕಂದಕ, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ, ಅನಗತ್ಯ ಮಾನವ ಹಸ್ತಕ್ಷೇಪ, ಸಾಮಾನ್ಯಕ್ಕಿಂತ ಅಧಿಕ ಮಳೆ ಇವುಗಳಿಂದಾಗಿಯೇ ಆಗಸ್ಟ್ ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಬಹಿರಂಗಪಡಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಜಿಲ್ಲಾಧಿಕಾರಿಗೆ ನೀಡಲಾದ ವರದಿಯಲ್ಲಿ ಸಲಹೆ ನೀಡಲಾಗಿದೆ. ತಲಕಾವೇರಿಯಲ್ಲಿ ಕಳೆದ ಅಕ್ಟೋಬರ್ 6 ರಂದು ಸಂಭವಿಸಿದ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ಆಕ್ಟೋಬರ್ 14 ಮತ್ತು 15ರಂದು ಭೇಟಿ ನೀಡಿದ್ದರು. ಜಿಲ್ಲಾಧಿಕಾರಿಗಳ ಕೋರಿಕೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಅವರು ಸ್ಥಳದಲ್ಲಿ ವಿಸ್ತೃತ ಅಧ್ಯಯನ ನಡೆಸಿ 16 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ್ದು, ದುರ್ಘಟನೆಗೆ ಕಾರಣವಾದ ಅಂಶಗಳು, ಈ ಹಿಂದಿನ ಇತಿಹಾಸ, ಮುಂದೆ ಇಂತಹ ದುರಂತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ಮಾಹಿತಿ ನೀಡಿದ್ದಾರೆ.
ತಲಕಾವೇರಿಯಲ್ಲಿ ಆಕ್ಟೋಬರ್ 6ರಂದು ಸಂಭವಿಸಿದ ಭೂಕುಸಿತಕ್ಕೂ ಮೊದಲು 3 ಬಾರಿ ಅಲ್ಲಿ ಇಂಥಹದ್ದೇ ಘಟನೆಗಳು ನಡೆದಿದೆ. ಮೊದಲ ಭೂಕುಸಿತ 2007ರ ಜೂ.30ಕ್ಕೆ ಸಂಭವಿಸಿದರೆ, 2ನೆಯದ್ದು 2018ರಲ್ಲಿ ಹಾಗೂ ಮೂರನೆಯದ್ದು 2019ರ ಆ.19ಕ್ಕೆ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಈ ವರ್ಷ ಆ.6ಕ್ಕೆ ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ತಜ್ಞರು ವರದಿಯಲ್ಲಿ ವಿವರಿಸಿದ್ದಾರೆ. ಮುಂಜಾನೆಯ 2.30ರ ಸಮಯದಲ್ಲಿ 45 ಮೀ. ಎತ್ತರದಿಂದ 50 ಮೀ. ಅಗಲದಲ್ಲಿ 160 ಮೀ. ಉದ್ದಕ್ಕೆ ಭೂಕುಸಿತ ಆಗಿದ್ದು, 2 ಕಿಮೀ ದೂರದ ತನಕ ಭೂ ಕುಸಿತ ವಿಸ್ತಾರ ಆಗಿದೆ. ಘಟನೆಯಲ್ಲಿ ತಲಕಾವೇರಿಯ ಹಿರಿಯ ಅರ್ಚಕ ಟಿ.ಎಸ್. ನಾರಾಯಣಾಚಾರ್ ಸೇರಿ ಐವರು ಸಾವನ್ನಪ್ಪಿದ್ದು, 6 ಜಾನುವಾರು, 1 ನಾಯಿ ಕೂಡ ಮೃತಪಟ್ಟಿದೆ. 2 ಮನೆ, 1 ದನದ ಕೊಟ್ಟಿಗೆ ಮಣ್ಣಿನಡಿಗೆ ಸೇರಿದೆ. ಸ್ವಲ್ಪ ಅರಣ್ಯಪ್ರದೇಶಕ್ಕೂ ಹಾನಿಯಾಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.