ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್.ಟಿ.ಪಿ.ಸಿ.ಆರ್. ಕೋವಿಡ್-19 ಸುಸಜ್ಜಿತ ಪ್ರಯೋಗಾಲಯವು ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ನಡೆಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಕೋವಿಡ್ ಶಂಕಿತರ ಪರೀಕ್ಷೆಗಾಗಿ ಮೈಸೂರಿಗೆ ಗಂಟಲು ದ್ರವ ಮಾದರಿಯನ್ನು ಆರಂಭದಲ್ಲಿ ಕಳುಹಿಸಿಕೊಡಲಾಗುತ್ತಿತ್ತು. ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಸ್ಥಾಪಿಸಿ ತ್ವರಿತವಾಗಿ ಫಲಿತಾಂಶ ಪಡೆಯುವ ಸದುದ್ದೇಶದೊಂದಿಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಳೆದ ಮೇ.6 ರಂದು ಆರಂಭಿಸಲಾದ ಸುಸಜ್ಜಿತ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಇದುವರೆಗೆ 1 ಲಕ್ಷದ 665 ಗಂಟಲು ದ್ರವ ಮಾದರಿ ಪರೀಕ್ಷೆ ಪೂರ್ಣಗೊಳಿಸಿದೆ.
ಆರಂಭದಲ್ಲಿ ಪ್ರತಿದಿನ 500 ಮಾದರಿ ಪರೀಕ್ಷೆಗಳಿಗಷ್ಟೇ ಸೀಮಿತವಾಗಿದ್ದ ಪ್ರಯೋಗಾಲಯ ಪ್ರಸ್ತುತ ಪ್ರತೀ ದಿನ 1 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಕಾಲಕಾಲಕ್ಕೆ ನೀಡಲಾಗುತ್ತಿರುವ ನಿರ್ದೇಶನಗಳು ಹಾಗೂ ಗುರಿಗೆ ಅನುಗುಣವಾಗಿ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ. ಕೋವಿಡ್ ಪರೀಕ್ಷೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ಫಲಿತಾಂಶ ನೀಡುವ ಸಾಮರ್ಥ್ಯವನ್ನು ಪ್ರಯೋಗಾಲಯ ವೃದ್ಧಿಸಿಕೊಂಡಿದೆ. ಗಂಟಲು ದ್ರವ ಮಾದರಿ ಸ್ವೀಕರಿಸಿದ ಗರಿಷ್ಠ 24 ಗಂಟೆಯೊಳಗೆ ಫಲಿತಾಂಶ ವರದಿಯನ್ನು ಪ್ರಯೋಗಾಲಯ ನೀಡುತ್ತಿದೆ.
ಆರಂಭದಿಂದಲೂ ಸತತವಾಗಿ ಕೋವಿಡ್ ಪರೀಕ್ಷೆಯನ್ನು ನಡೆಸಿಕೊಂಡು ಬರುತ್ತಿರುವ ಪ್ರಯೋಗಾಲಯ 24X7 ಅವಧಿಯೂ ಕಾರ್ಯನಿರ್ವಹಿಸುತ್ತಿದೆ. ತ್ವರಿತ ಫಲಿತಾಂಶ ನೀಡುತ್ತಿರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲು ಸಹಕಾರಿಯಾಗಿದೆ.
ಪ್ರಯೋಗಾಲಯವು ಚಾಮರಾಜನಗರ ಜಿಲ್ಲೆಯ ಶಂಕಿತರ ಮಾದರಿ ಪರೀಕ್ಷೆಗಳನಷ್ಟೇ ನಡೆಸಿಲ್ಲ. ರಾಮನಗರ, ತುಮಕೂರು, ಗದಗ್, ಉತ್ತರಕನ್ನಡ, ದಾವಣಗೆರೆ ಜಿಲ್ಲೆಯಿಂದ ಬಂದ ಮಾದರಿಗಳ ಪರೀಕ್ಷೆಯನ್ನು ನಿಗದಿತ ಅವಧಿಯೊಳಗೆ ಕೈಗೊಂಡು ಫಲಿತಾಂಶ ವರದಿಯನ್ನು ಶೀಘ್ರವಾಗಿ ರವಾನಿಸುವ ಮೂಲಕ ತನ್ನ ಕಾರ್ಯ ಕ್ಷಮತೆಯನ್ನು ಸಾಬೀತುಪಡಿಸಿದೆ.
ಪ್ರಯೋಗಾಲಯದಲ್ಲಿ ಮೈಕ್ರೊ ಬಯಾಲಜಿ ವಿಭಾಗದ ಮುಖ್ಯಸ್ಥರು, ಮೂವರು ಸಂಶೋಧನಾ ಸಿಬ್ಬಂದಿ, 8 ಮಂದಿ ಲ್ಯಾಬ್ ಟೆಕ್ನಿಷಿಯನ್, 7 ಮಂದಿ ಡಾಟಾ ಎಂಟ್ರಿ ಆಪರೇಟರ್, ಇತರೆ ಮಲ್ಟಿ ಟಾಸ್ಕಿಂಗ್ ಮೂವರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಸುಸಜ್ಜಿತ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಯನ್ನು ನಡೆಸಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಿರುವುದು ಹೆಗ್ಗಳಿಕೆಯಾಗಿದೆ. ಕೋವಿಡ್ ಪರೀಕ್ಷೆ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ಹಲವು ಗಂಭೀರ ಕಾಯಿಲೆಗಳ ರೋಗ ಪರೀಕ್ಷಾ ವಿಧಾನಕ್ಕೂ ಪ್ರಯೋಗಾಲಯ ಬಳಕೆಯಾಗಲಿದೆ. ಆರೋಗ್ಯ ಕ್ಷೇತ್ರದ ಇನ್ನಿತರ ಮಹತ್ತರ ಸಂಶೋಧನೆಗಳಿಗೆ ಪ್ರಯೋಗಾಲಯ ಉಪಯೋಗಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದ್ದಾರೆ.