ಮಂಡ್ಯ: ಕೊಳಗೇರಿ ನಿವಾಸಿಗಳಿಗೆ ಆದ್ಯತೆ ಮೇರೆಗೆ ಶೀಘ್ರವಾಗಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಸೂಚಿಸಿದರು.
ನಗರದ ಚಿಕ್ಕಮಂಡ್ಯ ಕೆರೆ ಅಂಗಳ ಹಾಗೂ ಹಾಲಹಳ್ಳಿ ಸಮೀಪ ನಿರ್ಮಿಸುತ್ತಿರುವ ಮೂಲಭೂತ ಸೌಕರ್ಯವಿರುವ ಹಾಗೂ ವಾಸಕ್ಕೆ ಯೋಗ್ಯವಾದ ವಸತಿ ಕಟ್ಟಡಗಳ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಕೊಳಗೇರಿ ನಿವಾಸಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಮನೆಗಳನ್ನು ನಿರ್ಮಿಸುತ್ತಿದ್ದು, ಆದ್ಯತೆ ಮೇಲೆ ಅತಿ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ವಸತಿ ಸಚಿವರಾಗಿದ್ದ ದಿ. ಡಾ.ಅಂಬರೀಷ್ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಅಂದಿನಿಂದ ಇದುವರೆಗೂ ಕೊಳಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯವಿರುವ ಕಟ್ಟಡ ನಿರ್ಮಾಣ ಕಾಮಗಾರಿಯು ಬಹಳಷ್ಟು ತಡವಾಗಿದೆ. ಇದರಿಂದ ಕೊಳಚೆ ಪ್ರದೇಶದ ನಿರಾಶ್ರಿತರು ಕಷ್ಟಕರವಾದ ವಾತಾವರಣದಲ್ಲಿ ಬದುಕು ನಡೆಸುತ್ತಿದ್ದು, ಹವಾಮಾನ ವೈಪರಿತ್ಯವಾದ ವರ್ಷದಲ್ಲಿ ಅಹಿತಕರ ಘಟನೆವುಂಟಾಗಿ ಅನಾಹುತಗಳು ಸಂಭವಿಸುವ ಸಂದರ್ಭಗಳು ಹೆಚ್ಚಾಗಿರುವುದರಿಂದ, ಶೀಘ್ರವಾಗಿ ಅವರಿಗೆ ಸೂರು ಕಲ್ಪಿಸಬೇಕು ಎಂದರು.
ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೊರತೆಯಿರುವ ಅನುದಾನ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ರಾಜ್ಯ ವಸತಿ ಸಚಿವರ ಗಮನಕ್ಕೆ ತಂದಿರುವುದು ನನ್ನ ಗಮನದಲ್ಲಿದೆ, ಈ ಕುರಿತು ರಾಜ್ಯ ವಸತಿ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿ ವಸತಿ ಇಲಾಖೆ ವತಿಯಿಂದ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.