ಮಂಡ್ಯ: ಕೊರೊನಾ ರೂಪಾಂತರ ವೈರಸ್ ಭೀತಿಯ ನಡುವೆಯೂ ಕ್ರೈಸ್ತರು ಶುಕ್ರವಾರ ಪವಿತ್ರವಾದ ಕ್ರಿಸ್ಮಸ್ ಹಬ್ಬವನ್ನು ಜಿಲ್ಲೆಯಾದ್ಯಂತ ಸರಳ,ಸಂಭ್ರಮದಿಂದ ಆಚರಿಸಿದರು.
ನಗರದ ಸಂತಜೋಸೆಫರ ಚರ್ಚ್ ಹಾಗೂ ಸಾಡೆಸ್ಮಾರಕ ದೇವಾಲಯ ಸೇರಿದಂತೆ ನಗರದ ವಿವಿಧ ಚರ್ಚ್ಗಳಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಯಮ ಮಾಡಿಕೊಂಡರು. ಕೋವಿಡ್ ಮಾರ್ಗಸೂಚಿಯನ್ವಯ ಚರ್ಚ್ ಒಳಗೆ 100 ರಿಂದ 200 ಮಂದಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು.
ಕ್ರಿಸ್ಮಸ್ ಮುನ್ನಾ ದಿನವಾದ ಗುರುವಾರ ಮಧ್ಯರಾತ್ರಿ 12 ಗಂಟೆವರೆಗೆ ಕ್ರೈಸ್ತರು ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತಂತೆ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಪ್ರಾರ್ಥಿಸಿದರು. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಚರ್ಚ್ಗಳಲ್ಲಿ ಪ್ರಾರ್ಥನಾ ಕಾರ್ಯಕ್ರಮ ಆರಂಭವಾಗಿ 10.30ರವರೆವಿಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಾದ್ರಿಗಳು ಭಕ್ತರಿಗೆ ಆಶೀರ್ವಚನ ನೀಡಿದರು.
ಫಾದರ್ ಜಾನೆಟ್ ಅವರು ಕ್ರಿಸ್ಮಸ್ ಸಂದೇಶ ಬೋಧಿಸಿದರು. ಜಗತ್ತನ್ನು ಕಾಡುತ್ತಿರುವ ಕೊರೋನಾ ತೊಲಗಲಿ, ಜನರು ಆರೋಗ್ಯವಂತರಾಗಿ ಶಾಂತಿ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಶುಭ ಸಂದೇಶ ನೀಡಿದರು.
ಕೋವಿಡ್-19 ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸಿಕೊಂಡು ಚರ್ಚ್ ಒಳಗೆ ಭಕ್ತರನ್ನು ಬಿಡುತ್ತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ನೀಡಲಾಗುತ್ತಿತ್ತು.
ರಾಜ್ಯದಲ್ಲೇ ಎರಡನೇ ದೊಡ್ಡ ಚರ್ಚ್ ಎನಿಸಿರುವ ಸಂತ ಜೋಸೆಫರ ದೇವಾಲಯದಲ್ಲಿ ಯೇಸು ಸ್ವಾಮಿಯ ಗೋದಲಿ (ಧರ್ಮ ಕೊಟ್ಟಿಗೆ)ಯನ್ನು ಗುಡಿಸಲಿನ ಆಕಾರದಲ್ಲಿ ನಿರ್ಮಿಸಲಾಗಿತ್ತು. ಅದರೊಳಗೆ ಯೇಸುವಿನ ಜನನವನ್ನು ಬಹಳ ಸುಂದರವಾಗಿ ಚಿತ್ರಿಸಲಾಗಿತ್ತು. ಯೇಸು ಹುಟ್ಟಿದ ಸಂದೇಶ ಮೊದಲು ಕುರುಬರಿಗೆ ರವಾನೆಯಾಗುತ್ತದೆ. ಅದನ್ನು ಕೇಳಿ ಧೂತರು ಗ್ಲೋರಿಗಳನ್ನು ಹಾಡುವ ರೀತಿಯಲ್ಲಿ ಗೋದಲಿಯನ್ನು ನಿರ್ಮಿಸಲಾಗಿತ್ತು.
ಗೋದಲಿಯ ಗುಡಿಸಲಿಗೆ ಸ್ಟಾರ್ ಗಳನ್ನು ಕಟ್ಟಿ ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪುಟ್ಟ ಪುಟ್ಟ ವಿದ್ಯುತ್ ದೀಪಗಳಲ್ಲಿ ಮಿನುಗುತ್ತಿದ್ದ ಗೋದಲಿ ವಿಶೇಷ ಆಕರ್ಷಣೆಯಾಗಿ ಎಲ್ಲರ ಗಮನಸೆಳೆಯಿತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚ್ ಹಾಗೂ ಚರ್ಚ್ನ ಆವರಣವನ್ನು ಅಲಂಕಾರಿಕ ದೀಪಗಳಿಂದ ಸಿಂಗರಿಸಲಾಗಿತ್ತು. ಕ್ರಿಸ್ಮಸ್ ಟ್ರೀಗೂ ದೀಪಾಲಂಕಾರ ಮಾಡಲಾಗಿತ್ತು.
ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಸಾಡೇ ಸ್ಮಾರಕ ದೇವಾಲಯದಲ್ಲೂ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.