ಕೆ.ಆರ್.ಪೇಟೆ: ಸಾವಿರಾರು ವರ್ಷಗಳ ಇತಿಹಾಸವಿರುವ ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಏರಿಯು ಇದೀಗ ಕಸ ಸುರಿಯುವ ತೊಟ್ಟಿಯಾಗಿದ್ದು, ಸುತ್ತಮುತ್ತಲಿನ ಜನ ತಮಗೆ ಬೇಡವಾದ ಕಸಕಡ್ಡಿ ಮತ್ತು ಹಳೆ ಮನೆಗಳ ಅವಶೇಷಗಳನ್ನು ತಂದು ಸುರಿಯುತ್ತಿರುವುದು ನಿತ್ಯವೂ ಕಂಡು ಬರುತ್ತದೆ.
ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಮೇಲುಕೋಟೆ ಮಾರ್ಗವಾಗಿ ಮಂಡ್ಯ ತಲುಪಲು ದೇವೀರಮ್ಮಣ್ಣಿ ಕೆರೆಯ ಏರಿಯನ್ನೇ ಎಲ್ಲರೂ ಅವಲಂಬಿಸಬೇಕಾಗಿದ್ದು ಪ್ರತಿ ದಿನ ಸಾವಿರಾರು ಸಂಖ್ಯೆಯ ದ್ವಿಚಕ್ರ ವಾಹನಗಳು, ಕಾರುಗಳು, ಆಟೋಗಳು, ಬಸ್, ಲಾರಿ, ಟ್ರ್ಯಾಕ್ಟರ್, ಜೆಸಿಬಿ ಸೇರಿದಂತೆ ಹಲವು ರೀತಿಯ ವಾಹನಗಳು ಚಲಿಸುತ್ತವೆ. ಆದರೆ ರಸ್ತೆ ಬದಿಯಲ್ಲಿಯೇ ಮಣ್ಣು, ಇಟ್ಟಿಗೆ ಸೇರಿದಂತೆ ಹಳೆಯ ಕಟ್ಟಡಗಳ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ರಸ್ತೆ ಕಿರಿದಾಗುತ್ತಿರುವುದರಲ್ಲದೆ, ತ್ಯಾಜ್ಯದ ವಾಸನೆ ಮೂಗಿಗೆ ಬಡಿಯುವಂತಾಗಿದೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ದೇವೀರಮ್ಮಣ್ಣಿ ಕೆರೆಯು ಜೀವನಾಡಿಯಲ್ಲದೆ, ಆಕರ್ಷಣೆಯೂ ಹೌದು ಇಂತಹ ಕೆರೆಯ ಅಭಿವೃದ್ಧಿಪಡಿಸುವುದು ಹಾಗಿರಲಿ. ಅದನ್ನು ಹಾಳುಗೆಡುವುದು ಕಣ್ಣೆದುರಿಗೆ ಕಾಣುತ್ತಿದ್ದರೂ ಸಂಬಂಧಿಸಿದ ಪುರಸಭೆಯ ಅಧಿಕಾರಿಗಳು ಮೌನಕ್ಕೆ ಜಾರಿರುವುದನ್ನು ನೋಡಿದರೆ, ಪಟ್ಟಣದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆಯೋ ಅಥವಾ ತ್ಯಾಜ್ಯ ಸುರಿಯುವವರ ಮೇಲೆ ಕ್ರಮ ಕೈಗೊಳ್ಳಲು ಭಯನಾ ಎಂಬ ಸಂಶಯಗಳು ಬರುತ್ತಿವೆ. ಇನ್ನು ಸಿಬ್ಬಂದಿ, ವಾಹನಗಳ ಕೊರತೆಯೋ? ಅಥವಾ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ ಕೆರೆಯ ಏರಿಯ ಮೇಲೆ ಹಲವು ತಿಂಗಳಿನಿಂದ ಕಸವು ರಾಶಿರಾಶಿಯಾಗಿ ಬೀಳುತ್ತಿದ್ದು, ವಿಲೇವಾರಿ ಮಾಡುವ ಗೋಜಿಗೆ ಇದುವರೆಗೆ ಯಾರೂ ಮುಂದಾದಂತೆ ಕಾಣುತ್ತಿಲ್ಲ. ಈ ರಸ್ತೆ ಮಾರ್ಗವಾಗಿ ಅಧಿಕಾರಿಗಳು ಜನಪ್ರತಿನಿಧಿಗಳು ತೆರಳುತ್ತಿದ್ದರೂ ಯಾರಿಗೂ ಈ ತ್ಯಾಜ್ಯಗಳ ರಾಶಿ ಕಾಣದಿರುವುದು ಮಾತ್ರ ವಿಷಾದದ ಸಂಗತಿಯಾಗಿದೆ.
ಪಟ್ಟಣದಲ್ಲಿ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸುವ ಸಾರ್ವಜನಿಕರ ತಾವು ಒಡೆದ ಗೋಡೆಯ ಇಟ್ಟಿಗೆ, ಗಾರೆ. ಮಣ್ಣು, ಕಲ್ಲು ಮುಂತಾದ ತ್ಯಾಜ್ಯಗಳನ್ನು ಟ್ರ್ಯಾಕ್ಟರ್ ಹಾಗೂ ಎತ್ತಿನ ಗಾಡಿ ಇನ್ನಿತರೆ ವಾಹನಗಳ ಮೂಲಕ ಕೆರೆಯ ಏರಿಯ ಸುರಿದು ತಮ್ಮ ಪಾಡಿಗೆ ಹೊರಟು ಹೋಗುತ್ತಾರೆ. ಬಹಳಷ್ಟು ಮಂದಿಗೆ ಕಸ ಸೇರಿದಂತೆ ಇತರೆ ತ್ಯಾಜ್ಯ ಸುರಿಯಲು ಈ ಪ್ರದೇಶ ಹೇಳಿ ಮಾಡಿಸಿದಂತಿದೆ. ಇಲ್ಲಿ ಕಸ ಸುರಿದರೂ ಯಾರೂ ಆಕ್ಷೇಪಿಸದಿರುವುದು ಇದಕ್ಕೆ ಕಾರಣವಾಗಿದೆ.
ಈ ಕೆರೆಯ ಏರಿಯ ರಸ್ತೆಯಲ್ಲಿ ತೆರಳಿದ್ದೇ ಆದರೆ ರಸ್ತೆಯ ಎಡಬಲಗಳಲ್ಲಿ ಪಟ್ಟಣದ ಕೋಳಿ, ಟೀ, ಹೋಟೆಲ್ಗಳ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಕಿರುವ ದೃಶ್ಯಗಳು ಮತ್ತು ಈ ಕಸದ ರಾಶಿಯಿಂದ ಪ್ಲಾಸ್ಟಿಕ್ ಹಾಳೆಗಳು, ಲೋಟಗಳು ಗಾಳಿಗೆ ತೂರಿ ಎಲೆಂದರಲ್ಲಿ ಹಾರಾಡಿ ಬಿದ್ದಿರುವುದು ಗೋಚರಿಸುತ್ತದೆ. ಪಟ್ಟಣದಲ್ಲಿ ಲೈಸೆನ್ಸ್ ಪಡೆದು ಕೋಳಿ ಅಂಗಡಿ ಇಟ್ಟಿರುವವರು ಕೋಳಿಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇ ಮಾಡದ ಪರಿಣಾಮ ಕೆರೆಯ ಏರಿಯ ಅಕ್ಕಪಕ್ಕದಲ್ಲಿ ಸುರಿದು ಹೋಗುತ್ತಾರೆ. ಪುರಸಭೆಯ ಅಧಿಕಾರಿಗಳು ಇಂತಹವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ವ್ಯಾಪಾರಿಗಳು ಆಗಾಗ ಕೋಳಿ ತ್ಯಾಜ್ಯವನ್ನು ಅಲ್ಲಲ್ಲಿ ಸುರಿದು ಹೋಗುವುದರಿಂದ ಅದು ಕೊಳೆತು ದಾರಿ ಹೋಕರಿಗೆ ಗಬ್ಬುವಾಸನೆ ಮೂಗಿಗೆ ಬಡಿಯುತ್ತದೆ.
ಪಟ್ಟಣದ ಸಾವಿರಾರು ಸಂಖ್ಯೆಯ ನಾಗರಿಕರು ಪ್ರತಿದಿನ ಕೆರೆಯ ಏರಿಯ ಮೇಲೆ ವಾಯುವಿಹಾರಕ್ಕೆ ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೋಳಿ ತ್ಯಾಜ್ಯದ ವಾಸನೆ ತಡೆಯಲಾರದೇ ವಾಯುವಿಹಾರಕ್ಕೆ ಕೆರೆಯ ಏರಿಯ ಮೇಲೆ ತೆರಳುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಕೂಡಲೇ ಪುರಸಭೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಂತೆ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.