ತುಮಕೂರು: ಮನುಜ ಮತ ವಿಶ್ವಪಥ ತತ್ವವನ್ನು ಸಾರಿದ ಮೊದಲ ವ್ಯಕ್ತಿ ಕುವೆಂಪು. ಅಂಬೇಡ್ಕರ್, ಗಾಂಧೀಜಿ, ಗೋಖಲೆ, ಬುದ್ಧ, ಬಸವಣ್ಣನವರ ಸಾಲಿಗೆ ಸೇರುವ ವ್ಯಕ್ತಿ. ಅವರು ಎಲ್ಲೆಡೆಯೂ ಎಲ್ಲಾ ಕಾಲದಲ್ಲೂ ಪ್ರಸ್ತುತ ಎನಿಸುತ್ತಾರೆ ಎಂದು ತುಮಕೂರು ವಿವಿ ಕುಲಪತಿ ಕರ್ನಲ್ ಪ್ರೊ ವೈ.ಎಸ್ ಸಿದ್ದೇಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ ಮಂಗಳವಾರ ಆಯೋಜಿಸಿದ್ದ ‘ಕುವೆಂಪು ಜನ್ಮ ದಿನಾಚರಣೆಯ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರು ಉದ್ಘಾಟಿಸಿದರು.
ಜೀವನದಲ್ಲಿ ಅಸ್ಮಿತೆಯನ್ನು ಕಾಪಾಡುವುದಕ್ಕಾಗಿ ಯಾವುದೆಲ್ಲ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಕುವೆಂಪು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ನಿರ್ದೇಶನಗಳನ್ನು ಅನುಸರಿಸಿದರೆ ಸುಖೀಸಮಾಜದ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.
‘ಕುವೆಂಪು ಅವರ ಲೇಖನಮಾರ್ಗ’ ಕುರಿತು ಉಪನ್ಯಾಸ ನೀಡಿದ ಹಿರಿಯ ವಿಮರ್ಶಕ ಎಚ್. ಎಸ್ ರಾಘವೇಂದ್ರ ರಾವ್, ಅಧ್ಯಾತ್ಮ, ಧರ್ಮ, ತತ್ವಶಾಸ್ರ್ತ ಯಾವುದನ್ನೂ ನಿರಾಕರಿಸದೇ ನೂರು ದೇವರನೆಲ್ಲಾ ನೂಕಾಚೆ ದೂರ, ತಾಯಿ ಭಾರತಾಂಬೆಯೇ ನಮ್ಮ ದೇವರು ಎಂದವರು ಕುವೆಂಪು ಎಂದು ವಿಶ್ಲೇಷಿಸಿದರು.
ಕುವೆಂಪು ತಮ್ಮ ನಿಲುವುಗಳ ಉದಾತ್ತತೆಯ ಹೇಳುತ್ತಲೇ ಸಮಾಜದ ನಿಲುವುಗಳ ಬಗ್ಗೆ ಹೇಳುತ್ತಾರೆ. ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಂಬುದು ಅವರ ನಿಲುವಾಗಿತ್ತು. ಆದ್ದರಿಂದ ಅನಿಕೇತನ ಪ್ರಜ್ಞೆ, ನಿಕೇತನಗಳನ್ನೂ ಕಾಪಾಡಿಕೊಂಡು ಅದರ ಆಚೆಗೆ ಇರುವುದು ಏನು ಎಂಬ ತಿಳುವಳಿಕೆ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಸಚಿವ ನರಸಿಂಹಪ್ಪ, ಕುವೆಂಪು ಅಧ್ಯಯನ ಪೀಠದ ಸಂಯೋಕಜಕಿ ಡಾ. ಗೀತಾ ವಸಂತ ಉಪಸ್ಥಿತರಿದ್ದರು.