ಮಂಡ್ಯ: ವೈದ್ಯರು, ತಂತ್ರಜ್ಞರು ಪ್ರತಿಭಟನೆ ಮಾಡಿ ಕರ್ತವ್ಯದಿಂದ ವಿಮುಖರಾದರೂ ತೊಂದರೆಯಾಗದು, ಆದರೆ, ರೈತ ಕೃಷಿಯಿಂದ ವಿಮುಖನಾಗಿ ಬೆಳೆ ಬೆಳೆಯದಿದ್ದರೆ ಆಹಾರದ ಸಮಸ್ಯೆ ತಲೆದೋರುವುದು ಖಚಿತ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರ ಹೇಳಿದರು.
ನಗರದ ಹೊರ ವಲಯದಲ್ಲಿರುವ ಶಶಿಕಿರಣ ಕನ್ವೆಷನ್ ಹಾಲ್ನಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಬಹುಬೆಳೆ ಪದ್ಧತಿ, ಸಾವಯವ ಕೃಷಿ, ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಉದ್ಯಮಗಳಿಗಿಂತಲೂ ಕೃಷಿ ಉದ್ಯಮ ಶ್ರೇಷ್ಠವಾದದ್ದು. ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಕೃಷಿಯೇ ಜೀವಾಳ. ಇದು ಹಿಂದೆ, ಇಂದು ಹಾಗೂ ನಾಳೆಯೂ ಕೃಷಿ ನಮ್ಮ ಅವಿಭಾಜ್ಯ ಅಂಗವಾಗಿದೆ. ಯಾವ ಊರಲ್ಲಿ ಒಕ್ಕಲು ಇಲ್ಲ, ಆ ಊರಲ್ಲಿ ಸುಖ-ಶಾಂತಿ ಇರುವುದಿಲ್ಲ. ಒಕ್ಕಲುತನವೇ ನಮ್ಮ ಬದುಕು ಅದನ್ನು ಬಂಗಾರ ಮಾಡಿಕೊಳ್ಳುವುದು ನಮ್ಮ ಕೈಯ್ಯಲ್ಲೇ ಇದೆ ಎಂದು ಹೇಳಿದರು.
ರೈತರು ಋತುಮಾನದ ಬೆಳೆ ಅನುಸರಿಸಬೇಕು. ಮಾವು, ಶ್ರೀಗಂಧ, ಕರಿಬೇವು, ಸೀಬೆ, ನೇರಳೆ ಜೊತೆ ಕುರಿ-ಕೋಳಿ ಸಾಕಾಣಿಗೆ ಮಾಡಿದಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯ. ತೋಟಗಾರಿಕೆ ಜೊತೆ ಅರಣ್ಯ ಕೃಷಿ ಮಾಡಿದರೆ ನಿಜವಾಗಲೂ ಗೆಲುವನ್ನು ಸಾಧಿಸಬಹುದು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ನಾನು ತಾಂತ್ರಿಕ ಪದವಿ ಪಡೆದಿದ್ದರೂ, ಅನಿವಾರ್ಯವಾಗಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಾಯಿತು. ಈ ಉದ್ಯಮದಲ್ಲಿ ಸಾಕಷ್ಟು ನೊಂದು-ಬೆಂದು ಮತ್ತು ಯಶಸ್ಸನ್ನೂ ಸಾಧಿಸಿz್ದÉೀನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೋಟ್ಯಧಿಪತಿಗಳನ್ನಾಗಿಸುವ ಶಕ್ತಿ ಶ್ರೀಗಂಧ ಬೇಸಾಯಕ್ಕಿದೆ. ನಾನೂ ಸಹ ನಮ್ಮ ಜಮೀನಿನಲ್ಲಿ ಜೀವಾಮೃತ ಹಾಕಿ ಬೆಳೆಸಿದ ಶ್ರೀಗಂಧದ ನರ್ಸರಿಯಲ್ಲಿ ಒಂದೇ ಒಂದು ಗಿಡವೂ ಸತ್ತಿಲ್ಲ. ಅಂತಹ ಆರೋಗ್ಯವಂತ ಶ್ರೀಗಂಧದ ಸಸಿಗಳನ್ನು ದೇಶದ ಎಲ್ಲ ರಾಜ್ಯಗಳಿಗೂ ಕಳುಹಿಸುತ್ತಿದ್ದೇನೆ. ಜೊತೆಗೆ ನಾನು ಇಂದು ಕುರಿಗಳನ್ನೂ ಮೇಯಿಸುತ್ತೇನೆ. ಕೋಳಿಗಳನ್ನೂ ಸಾಕಿ ಕಾಳು ಹಾಕುತ್ತಿದ್ದೇನೆ. ಕೆಲಸದವರ ಜೊತೆಗೆ ಮಣ್ಣಿನಲ್ಲೂ ದುಡಿಮೆ ಮಾಡುತ್ತೇನೆ. ಈ ರೀತಿಯ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನನಗೆ ಪ್ರಶಸ್ತಿಗಳು ಒಲಿದುಬಂದಿವೆ. ನನಗೆ ಬಂದಿರುವ ಎಲ್ಲ ಪ್ರಶಸ್ತಿಗಳನ್ನು ಹೆಣ್ಣು ಮಕ್ಕಳಿಗೆ ಸಮರ್ಪಣೆ ಮಾಡುತ್ತೇನೆ. ರೈತರಿಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸಗಳು ಆಗಬೇಕು. ಕೃಷಿ ಕ್ಷೇತ್ರ ಕಸುಬಲ್ಲ, ಅದೊಂದು ಉಧ್ಯಮ ಎಂಬುದನ್ನು ತೋರಿಸಿಕೊಟ್ಟಿದ್ದೇನೆ ಎಂದು ತಿಳಿಸಿದರು.
ಹೆಣ್ಣು ಮಕ್ಕಳು ಏನನ್ನೂ ಸಾಧಿಸಲಾಗದು ಎಂದು ಕುಳಿತುಕೊಳ್ಳುವುದು ಸರಿಯಲ್ಲ, ಹೆಣ್ಣು ಶಕ್ತಿ ಸ್ವರೂಪ. ಅಂತಹ ಛಲ ನಿಮ್ಮಲ್ಲಿರುತ್ತದೆ. ಏನೇ ಕೆಲಸ ಮಾಡಿದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡು ಛಲದಿಂದ ಸಾಧಿಸಬೇಕು. ಆಗ ಮಾತ್ರ ಎಲ್ಲದರಲ್ಲೂ ಯಶಸ್ಸು ಗಳಿಸಲು ಸಾಧ್ಯ ಎಂದು ಸಲಹೆ ನೀಡಿದರು. ಪ್ರಾಂತೀಯ ಸಮ್ಮಿಲನದ ಅಂಗವಾಗಿ 50 ಮಂದಿ ರೈತರಿಗೆ ನೇಗಿಲು, ನೊಗ ಹಾಗೂ ಔಷಧಿ ಸಿಂಪಡಿಸುವ ಕೈಪಂಪುಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯಕ್ರಮ ಮಾಡಲಾಯಿತು.